ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ಎರಡು ಟ್ರಕ್‌ ಲೋಡ್‌ ಅಕ್ರಮ ಪಡಿತರ ಅಕ್ಕಿ ವಶ

Last Updated 5 ಅಕ್ಟೋಬರ್ 2022, 14:16 IST
ಅಕ್ಷರ ಗಾತ್ರ

ಬಳ್ಳಾರಿ: ಎರಡು ಟ್ರಕ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಸಿರುಗುಪ್ಪ ತಾಲ್ಲೂಕಿನ ಇಬ್ರಾಹಿಂಪುರ ಚೆಕ್‌ಪೋಸ್ಟ್‌ ಬಳಿ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ಜತೆಗೂಡಿ ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ’ಪಡಿತರ ಅಕ್ಕಿ ಅಕ್ರಮ ದಂಧೆ‘ ಕುರಿತು ’ಪ್ರಜಾವಾಣಿ‘ ಸೋಮವಾರದ ಸಂಚಿಕೆಯ ’ನಮ್ಮ ಜನ ನಮ್ಮ ಧ್ವನಿ‘ ಅಂಕಣದಲ್ಲಿ ವರದಿ ಪ್ರಕಟಿಸಿದ ಒಂದೇ ದಿನದಲ್ಲಿ ಎರಡು ಟ್ರಕ್‌ ಪಡಿತರ ಅಕ್ಕಿ ಅಕ್ರಮ ಸಾಗಣೆ ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ತಾಲ್ಲೂಕಿನ ಕರಾಡಿ ಗುಡ್ಡ ಸರ್ಕಲ್‌ ಹಿರೇ ಕೊಟ್ನಕಲ್‌ ಗ್ರಾಮದ ವಿನೋದ್‌ ಮಲ್ಲಿಕಾರ್ಜುನ (25), ಸಿಂಧನೂರು ತಾಲ್ಲೂಕಿನ ಶಿವಪುತ್ರಪ್ಪ ಮಲ್ಲಪ್ಪ ರಾಮರೆಡ್ಡಿ (32), ಸಿರುಗುಪ್ಪ ಪಟ್ಟಣದ ಸದಾಶಿವ ನಗರದ ಜಲಾಲಿ ಜನಾರ್ದನ ಅಲಿಯಾಸ್‌ ಹುಲುಗಪ್ಪ (42), ತೆಕ್ಕಲ ಕೋಟೆ ಪಿಂಜಾರ ಓಣಿ ಮಹಮ್ಮದ್‌ ಅಲಿ ಮಾಬುಸಾಬ್‌ (52), ಆಂಧ್ರದ ಕರ್ನೂಲ್‌ನ ವೆಂಕಟ್ಟರೆಡ್ಡಿ ಮತ್ತು ಬಳ್ಳಾರಿಯ ಹಾಲ್ದಾಳ್ ವೀರಭದ್ರಪ್ಪ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಟ್ರಕ್‌ ಮಾಲೀಕರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಸಿರುಗುಪ್ಪ ಪೊಲೀಸ್‌ ಠಾಣೆ ಪಿಎಸ್‌ಐ ಕೆ. ರಂಗಯ್ಯ, ಸಿಬ್ಬಂದಿ ಅಲ್ಲೂರಯ್ಯ, ಕಾಶಿನಾಥ್‌, ಅಮರೇಶ್‌, ದ್ಯಾಮನಗೌಡ, ಗಾದಿಲಿಂಗಪ್ಪ ಅವರನ್ನೊಳಗೊಂಡ ತಂಡ ಚೆಕ್‌ಪೋಸ್ಟ್‌ನಲ್ಲಿ ಟ್ರಕ್‌ ತಡೆದು ಅಕ್ರಮ ಅಕ್ಕಿ ವಶಪಡಿಸಿಕೊಂಡಿದೆ.

ಚಾಲಕ ವಿನೋದ್‌ ಹಾಗೂ ಶಿವಪುತ್ರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ದಾಖಲೆಗಳಿಲ್ಲದ ಅಕ್ರಮ ಅಕ್ಕಿಯನ್ನು ಮಾನವಿಯ ಹಾಲ್ದಾಳ್‌ ವೀರಭದ್ರಪ್ಪ ಅವರಿಗೆ ಸಾಗಿಸುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ. ಇದನ್ನು ಬಾಗೇವಾಡಿ ಗ್ರಾಮದ ಸಮೀಪದ ಖಾಲಿ ಜಾಗದಲ್ಲಿ ಜಲಾಲಿ ಜನಾರ್ದನ್‌, ಮಹಮ್ಮದ್‌ ಅಲಿ ಹಾಗೂ ಆಧೋನಿಯ ವೆಂಕಟರೆಡ್ಡಿ ಲೋಡ್‌ ಮಾಡಿಸಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾಗಿ ಆಹಾರ ಇಲಾಖೆಯ ನಿರೀಕ್ಷಕ ಜಿ. ಮಹಾರುದ್ರಗೌಡ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ವಶಪಡಿಸಿಕೊಂಡ ಒಂದು ಟ್ರಕ್‌ನಲ್ಲಿ 421 ಮೂಟೆ, ಇನ್ನೊಂದು ಟ್ರಕ್‌ನಲ್ಲಿ 500 ಮೂಟೆ ಪಡಿತರ ಅಕ್ಕಿ ಸಾಗಿಸಲಾಗುತಿತ್ತು. ಈ ಅಕ್ಕಿಯನ್ನು ಬಡತನ ರೇಖೆಗಿಂತ ಮೇಲಿರುವವರಿಗೆ (ಎ‍‍ಪಿಎಲ್‌ ಕಾರ್ಡುದಾರರಿಗೆ) ಹಂಚಲು ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗಿತ್ತು. ಈ ಅಕ್ಕಿಯ ಬೆಲೆ ಪ್ರತಿ ಕೆ.ಜಿ.ಗೆ ₹ 15. ವಶಪಡಿಸಿಕೊಂಡ ಎರಡು ಟ್ರಕ್‌ನಲ್ಲಿರುವ ಅಕ್ಕಿಯ ಒಟ್ಟು ಬೆಲೆ ₹ 7.25 ಲಕ್ಷ ಎಂದು ಎಫ್ಐಆರ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT