ಭಾನುವಾರ, ಏಪ್ರಿಲ್ 2, 2023
32 °C
ಫೆ.2ರವರೆಗೆ ಹಂಪಿ ಆನೆಸಾಲು ಮಂಟಪದ ಬಳಿ ಕಾರ್ಯಕ್ರಮ

ಹೊಸಪೇಟೆ : ಧ್ವನಿ–ಬೆಳಕಿನಲ್ಲಿ ವಿಜಯನಗರ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವ’ದ ಅಂಗವಾಗಿ ತಾಲ್ಲೂಕಿನ ಹಂಪಿ ಆನೆಸಾಲು ಮಂಟಪದ ಎದುರು ಆಯೋಜಿಸಿರುವ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಜನರ ಮನಸೂರೆಗೊಳಿಸುತ್ತಿದೆ.

ಭಾನುವಾರ ರಾತ್ರಿ ಹಂಪಿ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಇಡೀ ಹಂಪಿ ಪರಿಸರದಲ್ಲಿ ಮೌನ ಆವರಿಸಿದೆ. ಆದರೆ, ನಿತ್ಯ ಸಂಜೆ 7ರಿಂದ 9.30ರವರೆಗೆ ಧ್ವನಿ ಮತ್ತು ಬೆಳಕಿನ ವೈಭವ ಮುಂದುವರೆದಿದೆ. ಹಂಪಿ ಉತ್ಸವಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ಜ.26ರಂದು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆರಂಭಗೊಂಡಿದ್ದು, ಫೆ.2ರವರೆಗೆ ನಡೆಯಲಿದೆ.

ಇಡೀ ಹಂಪಿ ಉತ್ಸವದಲ್ಲಿ ಪ್ರತಿ ಸಲ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿರುತ್ತದೆ. ಜನ  ‘ವಿಜಯನಗರ ವೈಭವ’ ಕಾರ್ಯಕ್ರಮ ನೋಡುವುದನ್ನು ಮರೆಯುವುದಿಲ್ಲ. ಹೀಗಾಗಿಯೇ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ.

ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ, ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಅಧಿಕಾರಿಗಳು, ಕಾರ್ಯಕ್ರಮಕ್ಕೂ ಎರಡು ವಾರ ಮುಂಚೆ ನಗರಕ್ಕೆ ಬಂದು ಬೀಡು ಬಿಟ್ಟಿದ್ದರು. 120 ಜನರ ಸಂದರ್ಶನ ನಡೆಸಿ, ಆಯ್ಕೆ ಮಾಡಿ, ಬಳಿಕ ಅವರಿಗೆ ತರಬೇತಿ ಕೊಟ್ಟು ಕಾರ್ಯಕ್ರಮಕ್ಕೆ ಅಣಿಗೊಳಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮುಂದುವರೆಯುತ್ತಿದೆ.

ಎರಡೂವರೆ ಗಂಟೆಯ ಕಾರ್ಯಕ್ರಮವು ವಿಜಯನಗರದ ಹುಟ್ಟು, ವೈಭವ, ಅವನತಿ ಮೇಲೆ ಬೆಳಕು ಚೆಲ್ಲುತ್ತದೆ. ಆನೆಸಾಲು ಮಂಟಪದ ಬಯಲಿನಲ್ಲಿ ತೆರೆದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕತ್ತಲಾದ ಬಳಿಕ ಆಯೋಜಿಸಲಾಗುತ್ತದ್ದು, ಕಾರ್ಯಕ್ರಮ ನೋಡುತ್ತಿದ್ದರೆ ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.

‘ಸ್ಥಳೀಯ ಕಲಾವಿದರು ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಜನ ಕೂಡ ಅಷ್ಟೇ ಉತ್ಸಾಹದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದು ಬಹಳ ವಿಶೇಷ ಕಾರ್ಯಕ್ರಮ ಆಗಿರುವುದರಿಂದ ಫೆ.2ರವರೆಗೆ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಕಾರ್ಯಕ್ರಮ ಉಸ್ತುವಾರಿ ವಹಿಸಿರುವ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದ್ದಾರೆ. ತೋರಣಗಲ್ಲು ವಾಡಾ ಆಯುಕ್ತ ಎಲ್‌.ಡಿ. ಜೋಶಿ ಸಮನ್ವಯದ ಕೆಲಸ ನಿರ್ವಹಿಸಿದ್ದಾರೆ.

 

ಹೆಸರಾಂತ ಕಲಾವಿದರ ಧ್ವನಿ

ಕಾರ್ಯಕ್ರಮದ ಪ್ರತಿಯೊಂದು ಕಾರ್ಯಕ್ರಮಕ್ಕೆ ಕನ್ನಡ ಚಿತ್ರ ರಂಗ ಹಾಗೂ ರಂಗಭೂಮಿಯ ಹೆಸರಾಂತ ಕಲಾವಿದರ ಧ್ವನಿ ಬಳಸಲಾಗಿದೆ. ನಟರಾದ ವಿಷ್ಣುವರ್ಧನ್, ಶ್ರೀನಾಥ್, ರಾಮಕೃಷ್ಣ, ಶ್ರೀನಿವಾಸಮೂರ್ತಿ, ಸಿ.ಆರ್. ಸಿಂಹ, ವಿ.ರಾಮಮೂರ್ತಿ, ಎಚ್.ವಿ. ವೆಂಕಟಸುಬ್ಬಯ್ಯ, ಬಿ.ಎಸ್. ಕೃಷ್ಣಮೂರ್ತಿ, ಕೆ.ವಿ ಬಾಲಸುಬ್ರಹ್ಮಣ್ಯಂ, ಸುಧೀಂದ್ರ ಶರ್ಮಾ, ಸತ್ಯನಾರಾಯಣ, ನಂಜುಂಡಯ್ಯ, ಎಚ್‍.ವಿ. ಪ್ರಕಾಶ್, ಶಂಕರನಾರಾಯಣ ಭಟ್, ಭಾರತಿ ವಿಷ್ಣುವರ್ಧನ್, ಆರ್‌.ಬಿ. ರಮ, ಬಿ.ಆರ್. ಅನುರಾಧ, ಎಂ.ಎಸ್. ವಿದ್ಯಾ, ಶೃತಿ ಕಂಠದಾನ ಮಾಡಿದ್ಧಾರೆ. ಉಮಾಶ್ರೀ, ಡಾ.ಬಿ.ವಿ. ರಾಜಾರಾಮ್ ಮತ್ತು ಹೂಗೊಪ್ಪಲು ಕೃಷ್ಣಮೂರ್ತಿ ನಿರೂಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು