ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ದಾರಿದೀಪವಾದ ‘ಸ್ಫೂರ್ತಿ’

ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
Last Updated 31 ಅಕ್ಟೋಬರ್ 2022, 8:53 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲಾಡಳಿತದಿಂದ ಆರಂಭಿಸಿರುವ ‘ಸ್ಫೂರ್ತಿ–2022’ ಜಿಲ್ಲೆಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದು, ಇದು ಅವರ ಬದುಕಿನಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಬಹುದು.

ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅದಕ್ಕೆ ಬೇಕಾದ ಸಿದ್ಧತೆ, ವಿಷಯಗಳ ಅಧ್ಯಯನದ ಬಗ್ಗೆ ರಾಜ್ಯದ ವಿವಿಧ ಭಾಗದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂಪೂರ್ಣ ಉಚಿತವಾಗಿ ತರಬೇತಿ ಕೊಡಲಾಗುತ್ತಿದೆ. ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಇರುವ ಕಾಲೇಜುಗಳನ್ನು ಆಯ್ಕೆ ಮಾಡಿ, ಪ್ರತಿ ಭಾನುವಾರ ತರಬೇತಿ ನೀಡಲಾಗುತ್ತಿದೆ.

ಜಿಲ್ಲಾ ಖನಿಜ ನಿಧಿಯಡಿ ₹60 ಲಕ್ಷ ಮೀಸಲಿರಿಸಲಾಗಿದ್ದು, ತರಬೇತಿಗೆ ಬೇಕಾದ ಪ್ರೊಜೆಕ್ಟರ್‌, ಮೈಕ್‌, ಧ್ವನಿವರ್ಧಕ, ಬೋರ್ಡ್‌ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗಿದೆ. ಇದರಲ್ಲಿ ಹೆಚ್ಚಿನ ಮೊತ್ತ ಸಂಪನ್ಮೂಲ ವ್ಯಕ್ತಿಗಳಿಗೆ ಖರ್ಚಾಗುತ್ತಿದೆ. ಸೆ. 25ರಿಂದ ತರಗತಿಗಳು ಆರಂಭವಾಗಿದ್ದು, ವಾರದಿಂದ ವಾರಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಪ್ರತಿ ವಾರ ಸರಾಸರಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ತರಬೇತಿಗೆ ವ್ಯವಸ್ಥೆ ಮಾಡಿರುವುದರಿಂದ ಅದರ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ವಿದ್ಯಾಭ್ಯಾಸ ಮುಂದುವರೆಸಿದವರು, ಅರೆಕಾಲಿಕ ಕೆಲಸ ಮಾಡುತ್ತಿರುವವರು, ಮನೆಯ ಜವಾಬ್ದಾರಿ ಹೊಂದಿರುವ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಜಾ ದಿನವಾದ ಭಾನುವಾರ ತರಗತಿಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಜಿಲ್ಲೆಯಾದ್ಯಂತ ಭಾರಿ ಸ್ಪಂದನೆ ಸಿಕ್ಕಿದೆ.

ಅಂದಹಾಗೆ, ಇದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರ ಮಹತ್ವಕಾಂಕ್ಷೆಯ ಯೋಜನೆ. ಅವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವುದರಿಂದ ಉತ್ತಮ ರೀತಿಯಲ್ಲಿ ಅನುಷ್ಠಾನಕ್ಕೆ ಬಂದಿದೆ. ಸ್ವತಃ ಅವರೇ ಸಮಯ ಸಿಕ್ಕಾಗಲೆಲ್ಲಾ ತರಗತಿಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಹಣ ಕೊಟ್ಟು ತರಬೇತಿ ಪಡೆಯಲಾಗದ ನಗರ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ.

‘ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ‘ವಿಜಯಿಭವ’ ಹೆಸರಿನ ಚಾನೆಲ್‌ ಆರಂಭಿಸಿದ್ದೆ. ಅದು ಕೂಡ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದೆ. ಈಗಲೂ ಅದು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಆರ್‌.ಸಿ. ರೆಡ್ಡಿ ಎಂಬುವರು ಎಲ್ಲರಿಗೂ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೊಡುತ್ತಿದ್ದರು. ನಾನು ಕೂಡ ಅದರ ಫಲಾನುಭವಿ. ಈ ಎರಡರ ಯಶಸ್ಸು ನೋಡಿಕೊಂಡು ‘ಸ್ಫೂರ್ತಿ’ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅನಿರುದ್ಧ್‌ ಶ್ರವಣ್‌ ಪಿ. ‘ಪ್ರಜಾವಾಣಿ’ಗೆ ಇದರ ಕಾರಣ ಬಿಚ್ಚಿಟ್ಟರು.

‘ಪ್ರತಿ ಭಾನುವಾರವಷ್ಟೇ ಕೋಚಿಂಗ್ ಮಾಡುತ್ತಿದ್ದರು. ಟಿಇಟಿ ಪರೀಕ್ಷೆ ನಿಗದಿ ಆಗಿರುವುದರಿಂದ ಅದರ ಬಗ್ಗೆಯೂ ತಿಳಿಸಿಕೊಡಬೇಕೆಂದು ಕೋರಿದಾಗ ಮೂರು ವಾರಗಳಿಂದ ಪ್ರತಿ ಶನಿವಾರ ಅದಕ್ಕಾಗಿಯೇ ಪ್ರತ್ಯೇಕವಾಗಿ ತರಬೇತಿ ಕೊಡಲಾಗುತ್ತಿದೆ. ಬಹಳ ಉತ್ತಮ ರೀತಿಯಲ್ಲಿ ಹೇಳಿಕೊಡುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರಾದ ಕಾವೇರಿ, ಅನುಷಾ ತಿಳಿಸಿದರು.

‘ಯಾವುದೇ ಜಾತಿ, ಮತ, ಪಂಥ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕೆಲವೇ ವರ್ಗಗಳಿಗೆ ಈ ರೀತಿಯ ಸೌಲಭ್ಯ ಇತ್ತು. ಜಿಲ್ಲಾಡಳಿತ ಎಲ್ಲರಿಗೂ ವಿಸ್ತರಿಸಿರುವುದು ಉತ್ತಮ. ಎಲ್ಲ ಜನಾಂಗಗಳಲ್ಲಿ ಬಡವರು ಇರುತ್ತಾರೆ’ ಎಂದು ಹೊಸಪೇಟೆಯ ರಮೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT