ಕೂಡ್ಲಿಗಿ: ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿಯ ದೈವಸ್ಥರು ಸೋಮವಾರ ಮಿಂಚೇರಿ ಗುಡ್ಡದ ಮೇಲೆ ಕಂಬಳಿ ಬೀಸುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.
ತಾಲ್ಲೂಕಿನ ಕೆಲ ಭಾಗದಲ್ಲಿ ಸರಿಯಾಗಿ ಮಳೆ ಬಂದಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಮಳೆಗಾಗಿ ಪ್ರಾರ್ಥಿಸಿ ಅನೇಕ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಅದರಂತೆ ಗೊಲ್ಲರಹಟ್ಟಿಯ ದೈವಸ್ಥರು ಸೋಮವಾರ ಗ್ರಾಮದ ಹೊರ ವಲಯದಲ್ಲಿರುವ ಮಿಂಚೇರಿ ಗುಡ್ಡದಲ್ಲಿನ ಮಳೆ ಮಲ್ಲಪ್ಪನಿಗೆ ಪೂಜೆ ಸಲ್ಲಿಸಿ, ಪರವು ಮಾಡಿದರು. ನಂತರ ಬೆಟ್ಟದ ಮೇಲೆ ಹೋಗಿ ಕರಿ ಕಂಬಳಿ ಹಾಸಿ ಇಬ್ಬರು ಬಾಲಕರನ್ನು ಅದರ ಮೇಲೆ ಕೂರಿಸಿ ಅವರಿಗೆ ಪೂಜೆ ಮಾಡಿದರು. ನಂತರ ಬಾಲಕರು ಕುಳಿತಿದ್ದ ಕಂಬಳಿಯನ್ನು ತೆಗೆದುಕೊಂದು ಕೋರಿ ಹುಡುಗರು (ಮದುವೆಯಾಗದೆ ಇರುವವರು) ಪಶ್ಚಿಮದತ್ತ ಕಂಬಳಿ ಬೀಸಿದರು. ನಂತರ ಪ್ರಸಾದ ವಿನಿಯೋಗ ಮಾಡಿದರು.
ಇದು ಅನಾದಿ ಕಾಲದಿಂದಲು ನಡೆದುಕೊಂಡು ಬಂದಿರುವ ಪದ್ದತಿಯಾಗಿದ್ದು, ನಾವು ಕೂಡ ಮುಂದುವರಿಸಿದ್ದೇವೆ. ಇದರಿಂದ ಮಳೆ ಬರುತ್ತದೆ ಎಂಬ ನಂಬುಗೆ ಇಂದಿಗೂ ಇದೆ ಎಂದು ದೊಡ್ಡಪ್ಪ, ಬೋರಪ್ಪ ಹೇಳುತ್ತಾರೆ.
ಗ್ರಾಮದ ಮುಖಂಡರಾದ ಬುಗುಡಿ ದೊಡ್ಡಪ್ಪ, ಬೋರಪ್ಪ ಬಿ., ಶಿವು, ಗೌಡ್ರ ಯರಪ್ಪ, ಬಿ.ಯರಪ್ಪ, ತಿಮ್ಮಪ್ಪ, ರಾಮಪ್ಪ ಹಾಗೂ ಹಟ್ಟಿಯ ಯಜಮಾನರು ಗ್ರಾಮಸ್ಥರು, ಯುವಕರು ಪೂಜೆಯಲ್ಲಿ ಭಾಗವಹಿಸಿದ್ದರು.