ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರಕ್ಕೆ ಅಂಟಿದ ಕಳಪೆ ಬಿತ್ತನೆ ಬೀಜ, ಕೀಟನಾಶಕದ ’ಶಾಪ ..!

ರೈತರ ಅಸಹಾಯಕತೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು, ವ್ಯಾಪಾರಿಗಳು
Last Updated 29 ನವೆಂಬರ್ 2022, 4:59 IST
ಅಕ್ಷರ ಗಾತ್ರ

ವಿಜಯನಗರ/ಬಳ್ಳಾರಿ: ಕಳೆದೊಂದು ವಾರದಲ್ಲಿ ಜಿಲ್ಲೆಯ ಮೂರು ಕಡೆ ರೈತರು ಕಳಪೆ ಕೀಟನಾಶಕ ಹಾಗೂ ಬಿತ್ತನೆ ಬೀಜದ ವಿರುದ್ಧ ಪ್ರತಿಭಟಿಸಿದ್ದಾರೆ. ಅತಿವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡು ಅತಂತ್ರವಾಗಿರುವಾಗಲೇ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಕೀಟ ನಾಶಕಗಳ ಸಮಸ್ಯೆ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಕಳಪೆ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರದ ಸಮಸ್ಯೆ ಕೃಷಿಕರಿಗೆ ಹೊಸದೇನೂ ಅಲ್ಲ. ಪ್ರತಿ ವರ್ಷ ಸಮಸ್ಯೆಗಳು ಒಂದಲ್ಲ, ಒಂದೆಡೆ ಇದ್ದೇ ಇರುತ್ತವೆ. ಮೆಣಸಿನ ಗಿಡಗಳಿಗೆ ಕಾಣಿಸಿಕೊಂಡಿರುವ ಎಲೆ ಮುದುಡು ರೋಗ, ಬೇರು ಹುಳಗಳ ರೋಗದಿಂದ ರೈತರು ಕಂಗಾಲಾಗಿದ್ದಾರೆ. ರೋಗ ಕಾಣಿಸಿಕೊಂಡ ತಕ್ಷಣ ಬಿತ್ತನೆ ಬೀಜ, ಕೀಟ ನಾಶಕ ಮತ್ತು ರಸಗೊಬ್ಬರ ಅಂಗಡಿಗಳಿಗೆ ರೈತರು ಓಡುತ್ತಾರೆ. ಈ ಪರಿಸ್ಥಿತಿಯನ್ನು ವರ್ತಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬಳ್ಳಾರಿ ಕೆ.ಸಿ ರಸ್ತೆಯ ಬಿತ್ತನೆ ಬೀಜ ಮತ್ತು ಕ್ರಿಮಿನಾಶಕ ಅಂಗಡಿಯವರು ಮೆಣಸಿನ ಗಿಡಗಳಿಗೆ ಕಾಣಿಸಿಕೊಂಡ ಎಲೆ ಮುದುಡು ರೋಗ ನಿಯಂತ್ರಣಕ್ಕೆ ಕೀಟ ನಾಶಕವನ್ನು ರೈತರಿಗೆ ಮಾರಾಟ ಮಾಡಿದ್ದಾರೆ. ಇದರ ಬೆಲೆ ಕೇಳಿದರೆ ಗಾಬರಿ ಆಗುತ್ತದೆ. ಬರೀ 100 ಮಿ.ಲೀ ₹ 1,200 ಅಂದರೆ, ಲೀಟರ್‌ ₹ 12,000. ಈ ಕೀಟ ನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರದಿದ್ದರಿಂದ ಬಳ್ಳಾರಿ ತಾಲ್ಲೂಕಿನ ಕೃಷಿಕರು ಅಂಗಡಿಗೆ ಮುತ್ತಿಗೆ ಹಾಕಿದ್ದರು. ಅಂಗಡಿಯವರು ಕೆಲವರಿಗೆ ಹಣ ಹಿಂತಿರುಗಿಸಿದರು. ಅದು ಬೇರೆ ಮಾತು.

ಇದೇ ರೋಗಕ್ಕೆ ಕುರುಗೋಡು ತಾಲ್ಲೂಕಿನಲ್ಲಿ ಬೇರೆ ಕೀಟ ನಾಶಕವನ್ನು ಅಂಗಡಿಯವರು ಕೊಟ್ಟಿದ್ದರು. ಅದರ ದರ ಪ್ರತಿ ಲೀಟರ್‌ಗೆ ₹ 3000. ಅಲ್ಲೂ ರೋಗ ನಿಯಂತ್ರಣಕ್ಕೆ ಬರದಿದ್ದರಿಂದ ರೈತರು ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್‌ ಮಧ್ಯಪ್ರವೇಶಿಸಿ ಕೀಟನಾಶಕದ ಮಾದರಿ ಸಂಗ್ರಹಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಪರೀಕ್ಷೆಗಾಗಿ ಕಳಿಸಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೆ ಮೂರು ದಿನ ಯಾವುದೇ ವಹಿವಾಟು ನಡೆಸದಂತೆ ಈ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು.

ಬಳ್ಳಾರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಕೀಟನಾಶಕದ ಮಾದರಿಯೇ ಕೃಷಿ ಅಧಿಕಾರಿಗಳಿಗೆ ಸಿಗುತ್ತಿಲ್ಲವಂತೆ! ಹೀಗಾಗಿ, ಕೀಟ ನಾಶಕವನ್ನು ಪರೀಕ್ಷೆಗೆ ಕಳುಹಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲವಂತೆ!! ಅಧಿಕಾರಿಗಳು ಎಲ್ಲ ಅಂಗಡಿಗಳಲ್ಲೂ ಹುಡುಕಾಡುತ್ತಿದ್ದಾರಂತೆ!!!

ಬಳ್ಳಾರಿ ತಾಲ್ಲೂಕಿನ ಸಿರಿವಾರ, ಸಂಜೀವ ರಾಯನಕೋಟೆ, ಜಾಲಿಹಾಳ್‌, ವೈ.ಬೂದಿಹಾಳ್‌ ಸೇರಿದಂತೆ ಅನೇಕ ಗ್ರಾಮಗಳ ರೈತರು ಕೀಟ ನಾಶಕ ಖರೀದಿಸಿ, ಮೆಣಸಿನ ಗಿಡಗಳಿಗೆ ಸಿಂಪಡಿಸಿದ್ದರು. ಆದರೆ, ಅದು ಸರಿಯಾಗಿ ಕೆಲಸ ಮಾಡಲಿಲ್ಲ. ರೋಗ ನಿಯಂತ್ರಣಕ್ಕೆ ಬರದಿದ್ದರಿಂದ ನವೆಂಬರ್‌ 18ರಂದು ರೈತರು ಅಂಗಡಿಗೆ ಮುತ್ತಿಗೆ ಹಾಕಿದ್ದರು. ಅದೇ ಸಮಯಕ್ಕೆ ಸ್ಥಳಕ್ಕೆ ತೆರಳಿದ್ದ ಪತ್ರಕರ್ತರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸುದ್ದಿ ಮುಟ್ಟಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್‌, ಅಂಗಡಿಗೆ ಬಂದು ಕ್ರಿಮಿನಾಶಕಕ್ಕೆ ಸಂಬಂಧಿಸಿದ ದಾಖಲೆಯನ್ನು ತಿರುವಿ ಹಾಕಿದರು. ‘ಕ್ರಿಮಿನಾಶಕದ ಮಾದರಿ ಪಡೆದು ಪರೀಕ್ಷೆಗೆ ಕಳಿಸಲಾಗುವುದು. ಔಷಧಿ ಕಳ‍ಪೆ ಗುಣಮಟ್ಟದ್ದು ಎಂದಾದರೆ ದೂರು ದಾಖಲಿಸಲಾಗುವುದು’ ಎಂದು ಹೇಳಿದ್ದರು. ವಾರ ಕಳೆದರೂ ಕೀಟನಾಶಕದ ಮಾದರಿಯೇ ಸಿಗದಿದ್ದರೆ ಪರೀಕ್ಷೆಗೆ ಕಳಿಸುವುದಾದರೂ ಹೇಗೆ?

‘ಮೆಣಸಿನ ಗಿಡಕ್ಕೆ ಸಿಂಪಡಿಸಿದ್ದು ಜೈವಿಕ ಕ್ರಿಮಿನಾಶಕ. ರಸಗೊಬ್ಬರದ ಅಂಗಡಿಗಳಲ್ಲಿಡುವ ಜೈವಿಕ ರಾಸಾಯನಿಕ ಅಥವಾ ಕ್ರಿಮಿನಾಶಕಗಳಿಗೆ ಯಾವುದೇ ಸರ್ಟಿಫಿಕೇಷನ್‌ ಅಗತ್ಯವಿಲ್ಲ. ಕೇವಲ ನೋಂದಣಿ ಇದ್ದರೆ ಸಾಕು. ಈ ಕುರಿತು ಹೈಕೋರ್ಟ್‌ ತೀರ್ಪೇ ಇದೆ’ ಎಂದು ಕೃಷಿ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದರು.

‘ ಹಾಗಾದರೆ, ಬಯೋ ಹೆಸರಲ್ಲಿ ಮಾರುತ್ತಿರುವ ಉತ್ಪನ್ನ ನಿಜವಾಗಿ ಜೈವಿಕವೇ ಎಂದು ಪರಿಶೀಲಿಸುವುದೇಗೆ?’ ಎಂಬುದು ರೈತರ ಪ್ರಶ್ನೆ. ಸಾಲಸೋಲ ತಂದು ದುಬಾರಿ ಬೀಜ, ಕ್ರಿಮಿನಾಶಕ ಖರೀದಿಸಿದ ರೈತರಿಗೆ ಬೆಳೆ ಕೈಕೊಟ್ಟರೆ ಗತಿಯೇನು? ಆತ ಬದುಕುವುದಾದರೂ ಹೇಗೆ? ಸಾಲಸೋಲ ಮಾಡಿದ ತಪ್ಪಿಗೆ ಹೊಲಮನಿ ಮಾರಿಕೊಂಡು ಹೆಂಡತಿ, ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಬೇಕಾಗುತ್ತದೆ.

ಕಳಪೆ ಬೀಜ, ರಸಗೊಬ್ಬರ ಮಾರಾಟಕ್ಕಿಲ್ಲ ಕಡಿವಾಣ:

ಕಳಪೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ಬೆಳಕಿಗೆ ಬರುತ್ತಿವೆ. ಪ್ರಕರಣಗಳ ಸಂಖ್ಯೆ ಹಿಂದಿಗಿಂತ ಸ್ವಲ್ಪ ತಗ್ಗಿದೆಯಾದರೂ ಅವುಗಳ ಮಾರಾಟದ ಮೇಲೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.

ಕಂಪನಿಗಳು ರಾಜ್ಯ ಸರ್ಕಾರ ಮತ್ತು ಕೆಲವಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟಕ್ಕೆ ಅನುಮತಿ ಪಡೆದುಕೊಂಡಿರುತ್ತವೆ. ಜಿಲ್ಲಾಮಟ್ಟದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಆಗಾಗ ಪರಿಶೀಲಿಸುತ್ತಾರೆ. ಆದರೆ, ರಾಜ್ಯ, ಕೇಂದ್ರ ಮಟ್ಟದಲ್ಲಿ ಅನುಮತಿ ಪಡೆದಿರುವುದರಿಂದ ಸ್ಥಳೀಯ ಅಧಿಕಾರಿಗಳು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ರೈತರಿಂದ ದೂರು ಬಂದಾಗ ಅದನ್ನು ಗಂಭೀರವಾಗಿ ಪರಿಗಣಿಸಿ, ಸ್ಯಾಂಪಲ್‌ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಆದರೆ, ಅಲ್ಪಸ್ವಲ್ಪ ವ್ಯತ್ಯಾಸ ಬಂದರೆ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಆದರೆ, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಕ್ಕ ಉದಾಹರಣೆಗಳು ತೀರ ಕಡಿಮೆ.

ಮೊದಲ ಸ್ಯಾಂಪಲ್‌ನಲ್ಲಿ ಅಲ್ಪ ವ್ಯತ್ಯಾಸ ಬಂದು, ಎರಡನೇ ಸ್ಯಾಂಪ್‌ಲ್‌ನಲ್ಲಿ ಸರಿ ಎಂದು ವರದಿ ಬಂದರೆ ಕಂಪನಿ ವಿರುದ್ಧ ಯಾವುದೇ ಸ್ವರೂಪದ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಆ ಕಂಪನಿಯ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಖರೀದಿಸಿ, ಹಾನಿ ಅನುಭವಿಸಿದ ರೈತರು ಮಾತ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ವಂಚಿಸಿದ ಕಂಪನಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ಕೊಡುತ್ತಾರೆ. ಆದರೆ, ಸಾಲ– ಸೂಲ ಮಾಡಿದ ರೈತರು ಅದಕ್ಕಾಗಿ ಕಾದು ಕೂರುವಷ್ಟು ಸಮಯ ಇರುವುದಿಲ್ಲ. ಮತ್ತೆ ಬೇರೆ ಕಂಪನಿಯ ಮೊರೆ ಹೋಗಿ ಕೃಷಿಯಲ್ಲಿ ತೊಡಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ರೈತರನ್ನು ವಂಚಿಸಲಾಗುತ್ತಿದೆ ಎನ್ನುವುದು ರೈತರ ದೂರಾಗಿದೆ.

ತಗ್ಗಿದ ಪ್ರಕರಣ:

2021–22ರಲ್ಲಿ ಹತ್ತು ಕಳಪೆ ಬೀಜ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು. ಕ್ರಿಮಿನಾಶಕಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಅವುಗಳ ಸ್ಯಾಂಪಲ್‌ ಸಂಗ್ರಹಿಸಿ ಕೇಂದ್ರೀಯ ಪ್ರಯೋಗಾಲಕ್ಕೆ ಕಳಿಸಿದಾಗ ಎರಡೂ ಕಳಪೆ ಅಲ್ಲ ಎಂದು ವರದಿ ಬಂದಿತ್ತು. ಪ್ರಸಕ್ತ ಸಾಲಿನಲ್ಲಿ ಕಳಪೆ ಬೀಜಕ್ಕೆ ಸಂಬಂಧಿಸಿದ ಐದು, ಕ್ರಿಮಿನಾಶಕದ ಎರಡು ಪ್ರಕರಣಗಳು ದಾಖಲಾಗಿವೆ. ಪ್ರಯೋಗಾಲಯಕ್ಕೆ ಸ್ಯಾಂಪಲ್‌ ಕಳಿಸಲಾಗಿದ್ದು, ಇನ್ನಷ್ಟೇ ಅವುಗಳ ವರದಿ ಜಿಲ್ಲಾಮಟ್ಟದ ಅಧಿಕಾರಿಗಳ ಕೈಸೇರಬೇಕಿದೆ.

‘ಮೇಲಿಂದ ಮೇಲೆ ಪರಿಶೀಲನೆ’:

‘ವಿಜಯನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆಯ 38 ಇನ್‌ಸ್ಪೆಕ್ಟರ್‌ಗಳು ಮೇಲಿಂದ ಮೇಲೆ ಕೃಷಿಗೆ ಸಂಬಂಧಿಸಿದ ವಸ್ತುಗಳ ಮಾರಾಟ ಮಳಿಗೆಗಳಿಂದ ಸ್ಯಾಂಪಲ್‌ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಾರೆ. ಒಂದುವೇಳೆ ಕಳಪೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೆ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗುತ್ತದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯೋಗಾಲಯಕ್ಕೆ ಕಳಿಸಿದ ಸ್ಯಾಂಪಲ್‌ನಲ್ಲಿ ಸ್ವಲ್ಪ ಮಟ್ಟಿನ ದೋಷ ಕಂಡು ಬಂದರೆ ಎರಡನೇ ಬಾರಿಗೆ ಸ್ಯಾಂಪಲ್‌ ಸಂಗ್ರಹಿಸಿ ಕಳುಹಿಸಲಾಗುತ್ತದೆ. ಅದು ಕೂಡ ಕಳಪೆ ಎನ್ನುವುದು ದೃಢಪಟ್ಟರೆ ಆ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಆದರೆ, ಅಂತಿಮವಾಗಿ ಕೇಂದ್ರೀಯ ಪ್ರಯೋಗಾಲಯದ ವರದಿ ಆಧರಿಸಿಯೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT