ಅರಸೀಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಶ್ರೀನಿವಾಸಪುರ ಗ್ರಾಮದ ಚೆಕ್ ಡ್ಯಾಂ ಭರ್ತಿಯಾಗಿ ಬೂದಿಹಾಳ್, ಹುಣಸೆಕಟ್ಟೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ವರ್ಷದ ಹಿಂದೆ ಗ್ರಾಮಸ್ಥರ ವಿರೋಧದ ನಡುವೆಯೂ ಅಂದಾಜು ₹35 ಲಕ್ಷದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಡ್ಯಾಂಗೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯಿಂದ ನೀರು ಮುಂದೆ ಸಾಗದೆ, ವಿವಿಧ ರಸ್ತೆಗಳು ಜಲಾವೃತಗೊಂಡಿವೆ.
ಜನರಿಗೆ ಹಳ್ಳ ದಾಟುವುದೇ ಸಮಸ್ಯೆಯಾಗಿದೆ. ಜೀವದ ಹಂಗು ತೊರೆದು ಹಳ್ಳ ದಾಟುವುದು ಕೆಲವರಿಗೆ ಅನಿವಾರ್ಯವೂ ಆಗಿದೆ.
‘ಕುಡಿಯುವ ನೀರಿನ ಕೊಳವೆ ಬಾವಿಯ ಮೋಟಾರ್ ಹಳ್ಳದ ಆಚೆ ಇದೆ. ನೀರು ಪೂರೈಸಲು ಹಳ್ಳ ದಾಟಲೇ ಬೇಕು’ ಎನ್ನುತ್ತಾರೆ ನಿರಗಂಟಿ ನಿಂಗಪ್ಪ.
‘ಚೆಕ್ ಡ್ಯಾಂ ಹೂಳು ತೆಗೆದಿಲ್ಲ. ನೀರು ಸಾಗುವಂತೆ ಮಾಡದ ಕಾರಣ ಕಳಪೆ ಕಾಮಗಾರಿ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಗ್ರಾಮಸ್ಥರಾದ ನಾರಪ್ಪ, ಸರ್ವೇಶ್, ಆರ್.ಪ್ರಕಾಶ್, ಉದಯ್ ಕುಮಾರ್, ಯು.ನಾಗರಾಜ್, ಬಸವರಾಜ್, ಅರುಣ್ ಕುಮಾರ್, ಮರುಳಸಿದ್ದಪ್ಪ, ರಾಮನಗೌಡ, ಹರೀಶ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು. ಚೆಕ್ ಡ್ಯಾಂ ಸಮಸ್ಯೆ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
- ಅಜಯ್ ಎಇ ಸಣ್ಣ ನೀರಾವರಿ ಇಲಾಖೆ
ಸೇತುವೆ ನಿರ್ಮಾಣಕ್ಕೆ ಆಗ್ರಹ
‘ಶ್ರೀನಿವಾಸಪುರ-ಬೂದಿಹಾಳ್ ಗ್ರಾಮದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚೆಕ್ ಡ್ಯಾಂ ನಿರ್ಮಾಣದಿಂದಾಗಿ ಸಮಸ್ಯೆ ತೀವ್ರವಾಗಿದೆ. ಆರಂಭದಲ್ಲೇ ಸೇತುವೆ ನಿರ್ಮಾಣ ಮಾಡಲು ಒತ್ತಾಯಿಸಲಾಗಿತ್ತು. ಭರವಸೆ ನೀಡಿದ್ದ ಅಧಿಕಾರಿಗಳು ನಂತರ ಈ ಕಡೆ ಹಿಂತಿರುಗಿ ನೋಡಿಲ್ಲ’ ಎಂದು ಗ್ರಾಮಸ್ಥ ಭರತ್ ಕುಮಾರ್ ತಿಳಿಸಿದರು.