ಪ್ರಜಾವಾಣಿ ವಾರ್ತೆ
ಕುಡತಿನಿ (ತೋರಣಗಲ್ಲು): ಪಟ್ಟಣದ ಚಲುವಾದಿ ಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಬೋಧನಾ ಕೊಠಡಿಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಮುಖಂಡರು ಹಾಗೂ ಮಕ್ಕಳು ಶಾಲಾ ಆವರಣದಲ್ಲಿ ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.
ಶಾಲಾಭಿವೃದ್ಧಿ ಸಮಿಯ ಅಧ್ಯಕ್ಷ ಬಸಪ್ಪ ಮಾತನಾಡಿ, ‘ಶಾಲೆಯ ನಾಲ್ಕು ಬೋಧನಾ ಕೊಠಡಿಗಳು ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದು ಮಕ್ಕಳು ನಿತ್ಯ ಪ್ರಾಣಭಯದಲ್ಲೆ ಪಾಠ ಪ್ರವಚನಗಳನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಕ್ಷೇತ್ರದ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರವಾಗಿ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
‘ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕ್ಷೇತ್ರದ ಜನ ಪ್ರತಿನಿಧಿಗಳು ಚಲುವಾದಿ ಕೇರಿಯ ಶಾಲೆಯ ಅಭಿವೃದ್ಧಿಯನ್ನು ಕಡೆಸಿರುವುದು ಸರಿಯಲ್ಲ. ಪರಿಶಿಷ್ಟ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶಾಸಕರು ತ್ವರಿತವಾಗಿ ಅನುದಾನವನ್ನು ಮಂಜೂರು ಮಾಡಿ ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇಲಾಖೆಯ, ಜನ ಪ್ರತಿನಿಧಿಗಳ ವಿರುದ್ಧ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಬಳ್ಳಾರಿ ಜಿಲ್ಲಾ ಪ್ರಜಾ ಪರಿವರ್ತನೆ ವೇದಿಕೆಯ ಅಧ್ಯಕ್ಷ ಸಿ.ಆನಂದ ಎಚ್ಚರಿಸಿದರು.
‘ಚಲುವಾದಿ ಕೇರಿಯ ಸರ್ಕಾರಿ ಶಾಲೆಯ ಶಿಥಿಲಗೊಂಡ ಬೋಧನಾ ಕೊಠಡಿಗಳನ್ನು ಶೀಘ್ರವಾಗಿ ತೆರವುಗೊಳಿಸಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಅನುದಾನದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಲಿಂಗಪ್ಪ ಪ್ರತಿಕ್ರಿಯಿಸಿದರು.
ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಸಿ.ರಾಮು, ಮುಖಂಡರಾದ ಗೀರೀಶ್, ದಿವಾಕರ, ರುದ್ರಪ್ಪ, ನಾಗರಾಜ್, ಹೇಮೇಶ್ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.