ಸಂಡೂರು: ತಾಲ್ಲೂಕಿನ ಸುಶೀಲಾನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೆಂಕಟಗಿರಿ ಗ್ರಾಮದಲ್ಲಿ ಹೊಸಪೇಟೆ, ಸಂಡೂರಿಗೆ ತೆರಳುವ ಬಸ್‌ಗಳನ್ನು ನಿತ್ಯವೂ ನಿಲ್ಲಿಸದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಆರೋಪಿಸಿ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಗಿನ 9 ಗಂಟೆಯಿಂದ ಎರಡೂ ಕಡೆಯಿಂದಲೂ ಆಗಮಿಸುತ್ತಿದ್ದ ಬಸ್‌ಗಳನ್ನು ತಡೆದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೆಎಸ್ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ನಿತ್ಯದ ಸಮಸ್ಯೆಗೆ ಪರಿಹಾರ ಸೂಚಿಸುವ ತನಕ ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದು ಕುಳಿತರು.
ವೆಂಕಟಗಿರಿಯಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಗೋಳು ಹೇಳುವಂತಿಲ್ಲ. ಪರೀಕ್ಷಾ ಸಂದರ್ಭಗಳಲ್ಲಂತೂ ಮಕ್ಕಳು ಎಷ್ಟೇ ವಿನಂತಿಸಿದರೂ ಬಸ್ ಗಳನ್ನು ನಿಲ್ಲಿಸುವುದಿಲ್ಲ.ಈ ಮಾರ್ಗದಲ್ಲಿ ತಡೆರಹಿತ ವಾಹನಗಳೇ ಹೆಚ್ಚು ಓಡಾಡುತ್ತಿದ್ದು ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ಹರಿಕೃಷ್ಣ ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಬಸ್ ಗಳನ್ನು ನಿಲ್ಲಿಸುವ ಭರವಸೆ ನೀಡಿದ ನಂತರ ಬಸ್ ಗಳನ್ನು ಬಿಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ದಿವಾಕರ್ ನಾಯ್ಕ್, ಸ್ವಾಮಿ ನಾಯ್ಕ್, ಸರ್ಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಿವು ನಾಯ್ಕ್, ಉಪಾಧ್ಯಕ್ಷ ಲಕ್ಷ್ಮಣ್ ನಾಯ್ಕ್, ಮುಖಂಡರಾದ ಆರ್. ಶಂಕರ್ ನಾಯ್ಕ್, ತಿಪ್ಪು ನಾಯ್ಕ್, ಎಚ್. ಕೃಷ್ಣಾ ನಾಯ್ಕ್, ತೇಜು ನಾಯ್ಕ್, ವೆಂಕಾ ನಾಯ್ಕ್ ಇದ್ದರು.