ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯಾ ಪಾದಚಾರಿಗಳಿಗೆ....!

ಬಳ್ಳಾರಿಯಲ್ಲಿ ಎಲ್ಲೂ ಇಲ್ಲ ಜೀಬ್ರಾ ಕ್ರಾಸಿಂಗ್‌; ರಸ್ತೆ ದಾಟಲು ಪ್ರತಿನಿತ್ಯ ಪರದಾಡುವ ಮಕ್ಕಳು, ವೃದ್ಧರು
Last Updated 22 ನವೆಂಬರ್ 2022, 14:30 IST
ಅಕ್ಷರ ಗಾತ್ರ

ಬಳ್ಳಾರಿ/ವಿಜಯನಗರ: ‘ಬಲಿಷ್ಠರ ಮುಂದೆ ದುರ್ಬಲರ ಆಟ ನಡೆಯುವುದಿಲ್ಲ‘ ಎಂಬ ಮಾತಿದೆ. ಈ ಮಾತು ಸಂಚಾರ ವ್ಯವಸ್ಥೆಗೂ ಅನ್ವಯಿಸಬಹುದು. ಇದು ಹೇಗೆಂದು ಅಚ್ಚರಿಯಿಂದ ಹುಬ್ಬೇರಿಸಬೇಡಿ.. ರಸ್ತೆಯಲ್ಲಿ ನೀವು ಸಾಮಾನ್ಯವಾಗಿ ಗಮನಿಸಿರಬಹುದು. ದೊಡ್ಡ ವಾಹನಗಳು ಚಿಕ್ಕ ವಾಹನಗಳನ್ನು ಲೆಕ್ಕಕ್ಕಿಡುವುದಿಲ್ಲ. ಸೈಕಲ್‌ ಸವಾರರು, ಪಾದಚಾರಿಗಳಿಗಂತೂ ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ...

ಅದರಲ್ಲೂ ದುಬಾರಿ ಐಷಾರಾಮಿ ಕಾರಿನಲ್ಲಿ ಕುಳಿತವರಿಗೆ ರಸ್ತೆಯಲ್ಲಿ ನಡೆದುಕೊಂಡು ತಿರುಗಾಡುವವರು ಕಾಣುವುದೇ ಇಲ್ಲ. ಇಡೀ ರಸ್ತೆ ತಮ್ಮೊಬ್ಬರಿಗೆ ಸೇರಿದ್ದು ಎಂಬ ಮನೋಭಾವನೆ ಹೊಂದಿರುತ್ತಾರೆ. ಶಾಲಾ ಮಕ್ಕಳು, ವಯೋವೃದ್ಧರು ರಸ್ತೆ ದಾಟುತ್ತಿದ್ದರೂ ವಾಹನಗಳು ನಿಲ್ಲುವುದೇ ಇಲ್ಲ. ಮುಂದೆ ಸಾಗುತ್ತಲೇ ಇರುತ್ತವೆ.

ಕೆಲವು ದೇಶಗಳನ್ನು ನೋಡಿ ನಾವು ಕಲಿಯುವುದು ಬೇಕಾದಷ್ಟಿದೆ. ಯಾರಾದರೂ ನಡೆದುಕೊಂಡು ರಸ್ತೆ ದಾಟುತ್ತಿದ್ದರೆ ನೂರಡಿ, ಇನ್ನೂರಡಿ ದೂರದಲ್ಲೇ ವಾಹನಗಳು ನಿಂತು ಬಿಡುತ್ತವೆ. ಅವರು ರಸ್ತೆ ದಾಟಿದ ಬಳಿಕ ಮುಂದೆ ಸಾಗುತ್ತವೆ. ಬಳ್ಳಾರಿ ಅಂಥ ಸ್ಥಿತಿಗೆ ತಲುಪಲು ನೂರು ವರ್ಷವಾದರೂ ಬೇಕಾಗಬಹುದು.

ಬಳ್ಳಾರಿ ನಗರದ ಜನಸಂಖ್ಯೆ ಹೊರಗಡೆ ಊರುಗಳಿಂದ ಬಂದು ಹೋಗುವವರೂ ಸೇರಿ ಐದಾರು ಲಕ್ಷ ಇದ್ದಿರಬಹುದು. ಇಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ‘ಜೀಬ್ರಾ ಕ್ರಾಸಿಂಗ್‌’ ಇಲ್ಲ. ಸಂಚಾರ ವ್ಯವಸ್ಥೆ ಸರಿಯಾಗಿದೆಯೇ ಎಂದು ಅವಲೋಕಿಸಿದರೆ ಅದೂ ಶೂನ್ಯ. ನಾ ಮುಂದು, ತಾ ಮುಂದು ಎಂದು ಹೋಗುವ ಭರದಲ್ಲಿ ಯಾರು, ಯಾರನ್ನೂ ಲೆಕ್ಕಿಸುವುದಿಲ್ಲ.

ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ಎಲ್‌ಐಸಿ ಕಚೇರಿ, ಎಸ್‌ಬಿಐ ಬ್ಯಾಂಕ್‌, ರೈಲ್ವೆ ನಿಲ್ದಾಣಗಳಿರುವ ಕಡೆಯೇ ಪಾದಚಾರಿಗಳಿಗೆ ಜೀ‌ಬ್ರಾ ಕ್ರಾಸಿಂಗ್‌ ಇಲ್ಲ. ಐದು ರಸ್ತೆಗಳು ಸೇರುವ ಗಡಗಿ ಚನ್ನಪ್ಪ ವೃತ್ತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ 140 ಅಡಿ ಸರ್ಕಲ್‌ ನಿರ್ಮಾಣ ಪ್ರಗತಿಯಲ್ಲಿದ್ದು, ವಾಹನಗಳ ಓಡಾಟಕ್ಕೇ ಸ್ಥಳವಿಲ್ಲ. ಅನಂತಪುರ ರಸ್ತೆಯ ಇಂದಿರಾ ಸರ್ಕಲ್‌, ಇನ್ನು ಪಾದಚಾರಿಗಳನ್ನು ಯಾರು ಕೇಳುತ್ತಾರೆ. ಸಿಟಿ ಬಸ್‌ ನಿಲ್ದಾಣದ ಮುಂದೆ ಇದೇ ಪರಿಸ್ಥಿತಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ದುರ್ಗಮ್ಮ ಗುಡಿ ಬಳಿ ಪಾದಚಾರಿ ಮಾರ್ಗವಿಲ್ಲ.

ಬೆಳಿಗ್ಗೆ ಹಾಗೂ ಸಂಜೆ ವಾಹನಗಳ ದಟ್ಟಣೆ ಇರುವ ಸಮಯದಲ್ಲೇ ಕೆಲವೆಡೆ ಪೊಲೀಸರೂ ಕಾಣುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರೂ ಎಲ್ಲೋ ಮರೆಯಲ್ಲಿ ನಿಂತಿರುತ್ತಾರೆ. ಉಳಿದವರು ವಾಹನಗಳ ತಪಾಸಣೆ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಸಂಚಾರ ಪೊಲೀಸರನ್ನು ಬಿಡಿ, ಗೃಹ ರಕ್ಷಕ ದಳದವರನ್ನೂ ವಾಹನ ತಪಾಸಣೆಗೆ ಬಳಸಿಕೊಳ್ಳಲಾಗುತ್ತಿದೆ. ಇದು ದಿನನಿತ್ಯದ ಕಿರಿಕಿರಿ...

ಇತ್ತೀಚೆಗೆ ಪೊಲೀಸ್‌ ಮಹಾನಿರೀಕ್ಷಕ ಮತ್ತು ಮಹಾ ನಿರ್ದೇಶಕ ಪ್ರವೀಣ್‌ ಸೂದ್‌, ರಸ್ತೆ ಮಧ್ಯದಲ್ಲಿ ವಾಹನ ತಡೆದು ತಪಾಸಣೆ ಮಾಡಬಾರದೆಂಬ ಸೂಚನೆ ನೀಡಿದ್ದರು. ಡಿಜಿ & ಐಜಿ ಸೂಚನೆಯನ್ನೂ ಪೊಲೀಸರು ಲೆಕ್ಕಕ್ಕೆ ಇಟ್ಟಂತಿಲ್ಲ. ಅವರು ಹೇಳುವುದು ಹೇಳಲಿ, ನಾವು ಮಾಡುವುದು ಮಾಡುತ್ತೇವೆ ಎಂಬಂತೆ ಸಂಚಾರಿ ಪೊಲೀಸರು ವರ್ತಿಸುತ್ತಿದ್ದಾರೆ. ಜನಸಂದಣಿ, ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಪೊಲೀಸರು ಇದ್ದರೆ ಸಂಚಾರ ವ್ಯವಸ್ಥೆ ಸ್ವಲ್ಪ ಮಟ್ಟಿಗಾದರೂ ಸುಧಾರಣೆ ಆಗಬಹುದು.

‘ಜೀಬ್ರಾ ಕ್ರಾಸಿಂಗ್‌ ದೂರದ ಮಾತು. ಪಾದಚಾರಿಗಳಿಗೆ ಫುಟ್‌ಪಾತ್‌ ಎಲ್ಲಿದೆ ತೋರಿಸಿ. ಬೆಂಗಳೂರು ರಸ್ತೆಗೆ ಹೋಗಿ ವ್ಯಾಪಾರಿಗಳು ಮೀನಾಕ್ಷಿ ಸರ್ಕಲ್‌ನಿಂದ ಬ್ರೂಸ್‌ ಪೇಟೆವರೆಗೆ ಇಡೀ ಫುಟ್‌ಪಾತ್‌ ಅತಿಕ್ರಮಿಸಿದ್ದಾರೆ. ಯಾರೂ ಕೇಳುವವರಿಲ್ಲ. ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ ಕಮಿಷನರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲರಿಗೂ ಮನವಿ ಕೊಟ್ಟಿದ್ದಾಯಿತು. ಯಾರೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ’ ಎಂದು ಅಂದ್ರಾಳ್‌ ಸೇವಾ ಸಮಿತಿ ಅಧ್ಯಕ್ಷ ಪಿ. ವೆಂಕಟರೆಡ್ಡಿ ಹೇಳಿದರು.

ವೆಂಕಟರೆಡ್ಡಿ ನಿಜವನ್ನೇ ಹೇಳಿದ್ದಾರೆ. ಹಬ್ಬ– ಜಾತ್ರೆಗಳು ಬಂದರಂತೂ ಆ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟ. ಹಿಂದೆ, ಮಹಾನಗರಪಾಲಿಕೆ ಕಮಿಷನರ್ ಆಗಿದ್ದ ಪ್ರೀತಿ ಗೆಹ್ಲೋಟ್‌ ಜೆಸಿಬಿ ಬಳಸಿ ಫುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸಿದ್ದರು. ಆ ಕೆಲಸದಿಂದ ವ್ಯಾಪಾರಿಗಳು ಹಾಗೂ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದರು. ಅವರು ಕೈಗೊಂಡಿದ್ದ ಸುಧಾರಣೆ ಕೆಲಸಗಳನ್ನು ಜೀರ್ಣಿಸಿಕೊಳ್ಳಲಾಗದ ಕೆಲವರು ಸರ್ಕಾರದ ಮೇಲೆ ಒತ್ತಡ ತಂದು ಅವರನ್ನು ವರ್ಗಾವಣೆ ಮಾಡಿಸಿದ್ದು ಈಗ ಇತಿಹಾಸ.

‘ಸುಧಾ ಕ್ರಾಸ್‌ ಬಳಿಯ ರೈಲ್ವೆ ಕ್ರಾಸಿಂಗ್ ಬಳಿ ಪಾದಚಾರಿಗಳು ನಡೆದು ಹೋಗಲು ಎಲ್ಲಿದೆ ಜಾಗ’ ಎಂದು ವೆಂಕಟರೆಡ್ಡಿ ಕೇಳಿದರು. ಹೌದು, ಅಲ್ಲಿನ ಪರಿಸ್ಥಿತಿಯ ಕುರಿತು ಎಷ್ಟು ಸಲ ಬರೆಯುವುದು. ಸರ್ಕಾರಕ್ಕೆ ಜಡತ್ವ ಬಂದುಬಿಟ್ಟಿದೆ ಎಂದು ಹೇಳುವುದಷ್ಟೇ ಉಳಿದಿರುವುದು.

ಬಳ್ಳಾರಿಯಲ್ಲಿ ಸಿಗ್ನಲ್‌ ದೀಪಗಳಿವೆ. ಹಿಂದಿನ ಪೊಲೀಸ್‌ ವರಿಷ್ಠಾಧಿಕಾರಿ, ಪೊಲೀಸ್‌ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಇಡೀ ಬಳ್ಳಾರಿಯ ಸಂಚಾರ ವ್ಯವಸ್ಥೆ ಮೇಲೆ ನಿಗಾ ವಹಿಸುವ ತಂತ್ರಜ್ಞಾನ ತಂದಿದ್ದಾರೆ. ರಸ್ತೆಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇಷ್ಟೆಲ್ಲಾ ಮಾಡಿದ ಅಧಿಕಾರಿಯ ಕಣ್ಣಿಗೆ ಪಾದಚಾರಿಗಳು ಬೀಳದೆ ಇದ್ದುದು ದುರದೃಷ್ಟಕರ. ಕೆಲವೆಡೆ ಸಿಗ್ನಲ್‌ ದೀಪಗಳೂ ಇವೆ. ಬೆಂಗಳೂರು, ಮೈಸೂರು ಮುಂತಾದ ನಗರಗಳಲ್ಲಿ ಪಾದಚಾರಿಗಳ ರಸ್ತೆ ಕ್ರಾಸಿಂಗ್‌ಗೆ ಅದರಲ್ಲೇ ಒಂದಷ್ಟು ಸಮಯ ಮೀಸಲಾಗಿಡಲಾಗಿದೆ. ಇಲ್ಲಿ ಅದೂ ಇಲ್ಲ.

ಪಾದಚಾರಿಗಳು, ವಾಹನಗಳು ಒಟ್ಟೊಟ್ಟಿಗೆ ಓಡಾಟ!

ಹೊಸಪೇಟೆ (ವಿಜಯನಗರ): ನಗರದಲ್ಲಿ ಪಾದಚಾರಿಗಳು, ವಾಹನಗಳು ಒಟ್ಟೊಟ್ಟಿಗೆ ಓಡಾಡುತ್ತವೆ!

ಹೌದು, ಕೇಳಲಿಕ್ಕೆ ಸ್ವಲ್ಪ ವಿಭಿನ್ನ ರೀತಿ ಅನಿಸಬಹುದು. ಆದರೆ, ಇದು ವಾಸ್ತವಾಂಶ. ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕನಕದಾಸ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲೆಲ್ಲ ರಸ್ತೆಗಳಲ್ಲಿ ಜನರ ಓಡಾಟಕ್ಕೆಂದು ಬಿಳಿ ಪಟ್ಟಿ ಬಳಿಯಲಾಗಿದೆ. ಅವುಗಳ ಮೂಲಕ ಜನ ಓಡಾಡಲೆಂದು ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ವಾಸ್ತವವಾಗಿ ಅದು ಬಳಕೆಯಾಗುತ್ತಿದೆಯೇ ಎಂದು ನೋಡಿದರೆ ಇಲ್ಲ ಎಂಬ ಉತ್ತರ ಸಿಗುತ್ತದೆ.

ನಗರದಲ್ಲಿ ಈ ಹಿಂದೆ ಡಾ.ಪುನೀತ್‌ ರಾಜಕುಮಾರ್ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಿಗ್ನಲ್‌ ದೀಪಗಳು ಕೆಲಸ ನಿರ್ವಹಿಸುತ್ತಿದ್ದವು. ಅವುಗಳಿಗೆ ಅನುಗುಣವಾಗಿ ವಾಹನಗಳು ಕೂಡ ಸಂಚರಿಸುತ್ತಿದ್ದವು. ಆದರೆ, ಕೆಲವು ತಿಂಗಳಿಂದ ಎರಡೂ ಕಡೆ ಅವುಗಳು ಬಳಕೆಯಾಗುತ್ತಿಲ್ಲ. ಸಿಗ್ನಲ್‌ ಕೆಲಸ ನಿರ್ವಹಿಸುತ್ತಿದ್ದಾಗ ಕೂಡ ಪಾದಚಾರಿಗಳಿಗೆ ಜೀಬ್ರಾ ಕ್ರಾಸಿಂಗ್‌ ಮೂಲಕ ಸಂಚರಿಸಲು ಅವಕಾಶ ಇರಲಿಲ್ಲ. ಇನ್ನೂ, ಸಿಗ್ನಲ್‌ ಇಲ್ಲದಿದ್ದಾಗ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಬಹುದು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಹೆಚ್ಚಿನ ಜನ, ವಾಹನ ದಟ್ಟಣೆ ಇರುತ್ತದೆ. ಒಂದೆಡೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವುದರಿಂದ ಜನ ಅನಿವಾರ್ಯವಾಗಿ ರಸ್ತೆಗಳ ಮೂಲಕ ಓಡಾಡುತ್ತಾರೆ. ಇನ್ನು, ರಸ್ತೆಗಳು ವಿಶಾಲವಾಗಿದ್ದರೂ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಇದರಿಂದಾಗಿ ಜನ ಹಾಗೂ ವಾಹನಗಳು ರಸ್ತೆಯಲ್ಲೇ ಓಡಾಡುವ ಅನಿವಾರ್ಯತೆ ಇದೆ. ಇದು ಪಾದಚಾರಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಎಷ್ಟೋ ಸಲ ಅಪಘಾತಗಳು ಸಂಭವಿಸಿದ ನಿದರ್ಶನಗಳಿವೆ. ಹೀಗಿದ್ದರೂ ಪರಿಸ್ಥಿತಿ ಬದಲಾಗಿಲ್ಲ.

ಹೊಸಪೇಟೆ ಜಿಲ್ಲಾ ಕೇಂದ್ರವಾಗಿ ಒಂದೂವರೆ ವರ್ಷ ಕಳೆದ ನಂತರವೂ ನಗರದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ನಿತ್ಯ ಪಾದಚಾರಿಗಳು ಅಪಾಯದ ನಡುವೆ ಓಡಾಡಬೇಕಾದ ಪರಿಸ್ಥಿತಿ ಇದೆ. ವಿದೇಶಗಳಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ ಇದೆ. ಪಾದಚಾರಿಗಳು ಜೀಬ್ರಾ ಕ್ರಾಸ್‌ ದಾಟುವವರೆಗೆ ಯಾವುದೇ ವಾಹನಗಳು ಸಂಚರಿಸುವುದಿಲ್ಲ. ಆದರೆ, ನಮ್ಮಲ್ಲಿ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧ. ಇಬ್ಬರೂ ಒಟ್ಟೊಟ್ಟಿಗೆ ಸ್ಪರ್ಧೆಗೆ ಬಿದ್ದವರಂತೆ ಓಡಾಡುವ ಪರಿಸ್ಥಿತಿ ಇದೆ. ಯುವಕರು, ಮಧ್ಯ ವಯಸ್ಕರು ಹೇಗೋ ರಸ್ತೆ ದಾಟುತ್ತಾರೆ. ಆದರೆ, ಮಕ್ಕಳು, ಹಿರಿಯ ನಾಗರಿಕರಿಗೆ ಇದು ಅಸಾಧ್ಯ.

‘ಹೊಸಪೇಟೆ ಜಿಲ್ಲಾ ಕೇಂದ್ರವಾದ ನಂತರ ಜನದಟ್ಟಣೆ, ವಾಹನದಟ್ಟಣೆ ಹೆಚ್ಚಾಗಿದೆ. ಅದರಲ್ಲೂ ವಾರಾಂತ್ಯಕ್ಕೆ ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತ, ಬಸ್‌ ನಿಲ್ದಾಣದ ಬಳಿ ಹೆಚ್ಚು ದಟ್ಟಣೆ ಇರುತ್ತದೆ. ಜೀಬ್ರಾ ಕ್ರಾಸಿಂಗ್‌ ಇರದ ಕಾರಣ ಜನ ಅವರ ಲಗೇಜ್‌, ಮಕ್ಕಳೊಂದಿಗೆ ಅಪಾಯದ ನಡುವೆ ಓಡಾಡಬೇಕಾದ ಪರಿಸ್ಥಿತಿ ಇದೆ. ಅದನ್ನು ಸರಿಪಡಿಸಲು ಇದು ಸಕಾಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಬಸವರಾಜ.

ಕೆಲವೇ ದಿನಗಳ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶ್ರೀಹರಿಬಾಬು ಬಿ.ಎಲ್‌. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಸಿಗ್ನಲ್‌ ಅಳವಡಿಕೆ, ಸುಗಮ ವಾಹನ ಸಂಚಾರಕ್ಕೆ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಈಗಾಗಲೇ ಅವರು ಜನದಟ್ಟಣೆ ಇರುವ ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ಪೊಲೀಸರನ್ನು ನಿಯೋಜಿಸಿ ವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ. ಜೀಬ್ರಾ ಕ್ರಾಸಿಂಗ್‌ ಮೂಲಕ ಜನ ಸುರಕ್ಷಿತವಾಗಿ ಓಡಾಡುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT