ತಾಯಿ–ಮಗು ರಕ್ಷಿಸಲು ಹೋಗಿ ಗರ್ಭಿಣಿ ಸಾವು

ಕಮಲಾಪುರ: ನೀರು ತರಲು ಹೋಗಿ ಬಾವಿಯಲ್ಲಿ ಕಾಲು ಜಾರಿ ಬಿದ್ದ ತಾಯಿ ಮತ್ತು ಮಗುವಿನ ರಕ್ಷಣೆಗೆ ತೆರಳಿದ್ದ ಗರ್ಭಿಣಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕಮಲಾಪುರ ದೇವಲು ನಾಯಕ ತಾಂಡಾದಲ್ಲಿ ಶುಕ್ರವಾರ ನಡೆದಿದೆ.
ರೇಷ್ಮಾ ಮಾರುತಿ ಚವ್ಹಾಣ(27) ಮೃತ ಗರ್ಭಿಣಿ. ಕಲ್ಪನಾ ಸಂತೋಷ ಚವ್ಹಾಣ ಹಾಗೂ ಇವರ ಮಗು ಶಶಾಂಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲ್ಪಾನಾ ಹಾಗೂ ಮೃತ ರೇಷ್ಮಾ ಸಂಬಂಧಿಗಳಾಗಿದ್ದು, ಕೃಷಿ ಕೆಲಸಕ್ಕೆಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದಾರೆ. ಕಲ್ಪನಾ ಅವರು ಎರಡು ವರ್ಷದ ಮಗು ಶಶಾಂಕನನ್ನು ಜೊತೆಗೆ ಕರೆದೊಯ್ದಿದ್ದರು. ಮಧ್ಯಾಹ್ನ ಕುಡಿಯಲು ನೀರು ತರಲು ಕಲ್ಪನಾ ತಮ್ಮ ಮಗು ಶಂಶಾಕನೊಂದಿಗೆ ಬಾವಿಗೆ ಇಳಿಯುವ ವೇಳೆ ಕಾಲು ಜಾರಿ ನೀರಲ್ಲಿ ಬಿದ್ದಳು. ಅಲ್ಲಿಯೇ ಇದ್ದ ರೇಷ್ಮಾ ಅವರು ರಕ್ಷಿಸುವ ದಾವಂತದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೂವರೂ ಬಾವಿಯಲ್ಲಿ ಬಿದ್ದದನ್ನು ಗಮನಿಸಿದ ಪಕ್ಕದ ಜಮೀನಿನ ಹಾಗೂ ತಾಂಡಾ ನಿವಾಸಿಗಳು ಕಲ್ಪನಾ ಹಾಗೂ ಶಶಾಂಕ ಅವರನ್ನು ರಕ್ಷಿಸಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ರೇಷ್ಮಾ ಅವರು ಪತ್ತೆಯಾಗಲಿಲ್ಲ. ಹುಮನಾಬಾದ್ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ರೇಷ್ಮಾ ಅವರ ಮೃತ ದೇಹ ಹೊರ ತೆಗೆಯಲಾಯಿತು’ ಎಂದರು.
ರೇಷ್ಮಾ ಪತಿ ಮಾರುತಿ ಚವ್ಹಾಣ ಹಾಗೂ ಕಲ್ಪನಾ ಪತಿ ಸಂತೋಷ ಚವ್ಹಾಣ ಕುವೈತ್‌ನಲ್ಲಿ ಇದ್ದರು. ವಿಷಯ ತಿಳಿದು ಶನಿವಾರ ಬೆಳಿಗ್ಗೆ ತಾಂಡಾಕ್ಕೆ ಆಗಮಿಸಿದರು. ಮಧ್ಯಾಹ್ನ ರೇಷ್ಮಾ ಅವರ ಅಂತ್ಯಕ್ರಿಯೆ ನಡೆಯಿತು.
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.