ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‍ಡಿಪಿಐ, ಪಿಎಫ್ಐ ಅನ್ನು ಶಾಶ್ವತವಾಗಿ ನಿಷೇಧಿಸಿ: ಸಚಿವ ಸುರೇಶ್ ಕುಮಾರ್

Last Updated 18 ಜನವರಿ 2020, 13:03 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಎಸ್‌ಡಿಪಿಐ ಹಾಗೂ ಪಿಎಫ್‌ಐ ದೇಶದ್ರೋಹಿ ಸಂಘಟನೆಗಳಾಗಿದ್ದು, ಅವುಗಳನ್ನು ಶಾಶ್ವತವಾಗಿ ನಿಷೇಧಿಸಬೇಕು ಹಾಗೂ ಅವು ಮತ್ತೆ ತಲೆ ಎತ್ತದಂತೆ ಎಚ್ಚರವಹಿಸಬೇಕು ಎಂದುಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.

ಹತ್ತಿರದ ಚಿಕ್ಕಮಾಗಡಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಹಿಂದೆ ಮಡಿಕೆರಿಯ ಕುಟ್ಟಪ್ಪ, ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣದಲ್ಲೂ ಇವರ ಕೈವಾಡವಿತ್ತು. ಈಗ ಸಂಸದ ತೇಜಸ್ವಿ ಸೂರ್ಯ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯಗೆ ಸಂಚು ರೂಪಿಸಿದ್ದಾರೆ. ಈ ಮೂಲಕ ಅವರ ಬಣ್ಣ ಮತ್ತೊಮ್ಮೆ ರುಜುವಾತಾಗಿದೆ’ ಎಂದು ಹೇಳಿದರು.

ಶಾಲಾ ಪಠ್ಯದಲ್ಲಿ ಟಿಪ್ಪು ಅಧ್ಯಾಯದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈಗಾಗಲೇ ಇತಿಹಾಸಕಾರರನ್ನು ಒಳಗೊಂಡ ಡಿಎಸ್‌ಈಆರ್‌ಟಿ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ‘ಪರೀಕ್ಷಾಪೇ ಚರ್ಚಾ’ ಎಂಬ ಕಾರ್ಯಕ್ರಮಕ್ಕೆ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು, ಕರ್ನಾಟಕದಿಂದ 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ಅದರಲ್ಲಿ 27 ಮಕ್ಕಳು ಸರ್ಕಾರಿ ಶಾಲೆಯ ಮಕ್ಕಳು ಎನ್ನುವುದು ಹೆಮ್ಮೆಯ ವಿಚಾರ. ದೇವಾಲಯದಷ್ಟೇ ವಿದ್ಯಾಲಯಗಳು ಮುಖ್ಯ. ಸರ್ಕಾರಿ ಶಾಲೆಗೆ ಪೋಷಕರು ಸರತಿಸಾಲಿನಲ್ಲಿ ಬಂದು ಅರ್ಜಿ ತುಂಬುವ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದೂ ಕರೆಕೊಟ್ಟರು.

ಹಸಿವು ನೀಗಿಸುವ ಶಕ್ತಿ ಶಿಕ್ಷಣಕ್ಕೆ ಇದೆ: ಸಂಸದ ಬಿ.ವೈ.ರಾಘವೆಂದ್ರ, ಮನುಷ್ಯನ ಹಸಿವನ್ನು ನೀಗಿಸುವ ಶಕ್ತಿ ಶಿಕ್ಷಣಕ್ಕಿದೆ. ಹಾಗಾಗಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ತಾಲ್ಲೂಕಿನ 72 ಗ್ರಾಮದ 104 ಶಾಲಾ ಕೊಠಡಿಗಳನ್ನು ₹ 10.80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುದಾನ ನೀಡಿದ್ದಾರೆ. ಈಗ 22 ಕೊಠಡಿಗಳ ಉದ್ಘಾಟನೆ ನಡೆಯುತ್ತಿದೆ. ಪ್ರವಾಹ ಪೀಡಿತ ಜಿಲ್ಲೆಯ ಶಾಲಾ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆಯಿಂದ ₹ 34 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT