ಬಾಳೆ ಬೆಲೆ ಕುಸಿತ ಕಂಗಲಾದ ರೈತರು, ಮಧ್ಯವರ್ತಿ ಸಮಸ್ಯೆಗೆ ಬೇಸರ

7
ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ಭಾಗದಲ್ಲಿ ಹೆಚ್ಚಿನ ಬೆಳೆ

ಬಾಳೆ ಬೆಲೆ ಕುಸಿತ ಕಂಗಲಾದ ರೈತರು, ಮಧ್ಯವರ್ತಿ ಸಮಸ್ಯೆಗೆ ಬೇಸರ

Published:
Updated:
Deccan Herald

ರಾಮನಗರ : ‘ಬಾಳೆ ಬೆಳೆದವರ ಬಾಳು ಬಂಗಾರ’ ಎನ್ನುವಂತಿದ್ದ ಸ್ಥಿತಿ ಈಗ ಬದಲಾಗಿದೆ. ಬಾಳೆಗೆ ಬೇಡಿಕೆ ಮತ್ತು ದರ ಏಕಾಏಕಿ ಕುಸಿದಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ಕಂಗಲಾಗಿದ್ದಾರೆ.

ಮೂರು ನಾಲ್ಕು ತಿಂಗಳ ಹಿಂದೆ ಬಾಳೆಗಿದ್ದ ದರ ಈಗಿಲ್ಲ. ಪಚ್ಚೆ ಬಾಳೆ ಮತ್ತು ಏಲಕ್ಕಿ ಬಾಳೆಯ ಬೆಲೆ ದಿಢೀರ್ ಕುಸಿತ ಕಂಡಿರುವುದು ಬೆಳೆಗಾರರನ್ನು ದಿಕ್ಕು ತೋಚದಂತೆ ಮಾಡಿದೆ. ರೈತರ ಬಳಿ ಕೆ.ಜಿ. ಪಚ್ಚೆ ಬಾಳೆಯನ್ನು ₹5ರಿಂದ 6ಕ್ಕೆ ಕುಸಿದಿದ್ದು ಖರೀದಿಸುವವರು ಇಲ್ಲದಂತಾಗಿದೆ.

ಈ ಬಾರಿ ಹೆಚ್ಚು ಬಾಳೆ ಬೆಳೆದಿರುವುದು ಹಾಗೂ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ರೀತಿಯಲ್ಲಿ ಬಾಳೆ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ. ಇದು ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಥಳೀಯವಾಗಿ ಮಾತ್ರವಲ್ಲದೆ ಬೇರೆ ಜಿಲ್ಲೆಗಳ ಮಾರುಕಟ್ಟೆಯಲ್ಲಿಯೂ ಬಾಳೆಗೆ ಬೆಲೆ ಸಿಗುತ್ತಿಲ್ಲ.

ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಕೆ.ಜಿ. ₹25 ಇದ್ದ ಪಚ್ಚೆ ಬಾಳೆ ದರ ಈಗ ₹20 ಕ್ಕೆ ಕುಸಿದಿದೆ. ಹೋಲ್ ಸೇಲ್ ನಲ್ಲಿ ₹17ಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಏಲಕ್ಕಿ ಬಾಳೆ ಕೆ.ಜಿ.ಗೆ ₹50 ರಿಂದ ₹52 ಇತ್ತು. ಈಗ ₹40 ರಿಂದ ₹45ಕ್ಕೆ ಕುಸಿತ ಕಂಡಿದೆ. ಹೋಲ್ ಸೇಲ್ ನಲ್ಲಿ ₹32ಕ್ಕೆ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ಉತ್ಪನ್ನವಾಗಿರುವ ಬಾಳೆಗೆ ಇನ್ನೂ ಕಡಿಮೆ ದರ ನಿಗದಿ ಪಡಿಸಲಾಗಿದೆ.

ಆದರೆ, ವರ್ತಕರು ಮಾತ್ರ ರೈತರಿಂದ ಕೆ.ಜಿ.ಪಚ್ಚೆ ಬಾಳೆಯನ್ನು ₹5 ಹಾಗೂ ಏಲಕ್ಕಿ ಬಾಳೆಯನ್ನು ₹27 ಕ್ಕೆ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ವಂಚನೆಯಿಂದಾಗಿ ಬಾಳೆ ಬೆಳೆಗಾರರು ಕಂಗಾಲಾಗಿದ್ದು, ಅನೇಕ ಮಂದಿ ಬಾಳೆ ಬೆಳೆಯುವುದನ್ನು ಕೈಬಿಡಲು ನಿರ್ಧರಿಸಿದ್ದಾರೆ. ಕೆಲವೆಡೆ ಅಸಲು ಕೂಡ ಸಿಗದೆ ರೈತರು ಹತಾಶರಾಗಿದ್ದಾರೆ.

ಜಿಲ್ಲೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆ ಪ್ರಮುಖವಾಗಿದ್ದರೂ ಬಾಳೆಯನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ಭಾಗದಲ್ಲಿ ಬಾಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದೀಗ ದಿಢೀರ್ ಬೆಲೆ ಕುಸಿತದಿಂದ ತೀವ್ರಹಾನಿ ಎದುರಿಸಬೇಕಾಗಿ ಬಂದಿದೆ.

ಜಿಲ್ಲೆಯಲ್ಲಿ ಈ ಹಿಂದೆ 1,223 ಹೆಕ್ಟೇರ್ ಬಾಳೆ ಇರುತ್ತಿತ್ತು. ಇದೀಗ ಹನಿ ನೀರಾವರಿ ಪದ್ಧತಿ, ಅದಕ್ಕೆ ಸಬ್ಸಿಡಿ ಪ್ರಯೋಜನ ದೊರೆಯುವಂತಾದ ಮೇಲೆ ಬಾಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸದ್ಯ 1,522 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಹಾಗೂ ಪಚ್ಚೆ ಬಾಳೆ ಇದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ರೈತರ ಬಳಿ ಪಚ್ಚೆ ಬಾಳೆಯನ್ನು ₹10 ರಿಂದ ₹12 ಕ್ಕೆ ಖರೀದಿಸಲಾಗುತ್ತಿತ್ತು. ಇದೀಗ ₹5ರಿಂದ 6 ಕ್ಕೆ ಖರೀದಿಸಿದರೆ ಅದೇ ಹೆಚ್ಚು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅದೇ ಪಚ್ಚೆ ಬಾಳೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ₹20 ರವರೆಗೂ ಮಾರಾಟ ಆಗುತ್ತಿದೆ.

ಏಲಕ್ಕಿ ಬಾಳೆ ಸಹ ಹಬ್ಬದ ದಿನಗಳಲ್ಲಿ ಕೆಜಿಗೆ ₹50 ರಿಂದ ₹55 ವರೆಗೂ ತಲುಪಿತ್ತು. ಆದರೆ, ಈಗ ಮಾರುಕಟ್ಟೆಯಲ್ಲಿ ₹40 ರಿಂದ ₹45 ಕ್ಕೆ ಇಳಿದಿದೆ. ರೈತರ ಬಳಿ ಕೆ.ಜಿ ಏಲಕ್ಕಿ ಬಾಳೆಯನ್ನು ₹25 ರಿಂದ 27 ಕ್ಕೆ ಖರೀದಿಸಲಾಗುತ್ತಿದೆ.

ಮಧ್ಯವರ್ತಿಗಳ ಹಾವಳಿ: ಅತ್ತ ರೈತರಿಗೂ ಉತ್ತಮ ಬೆಲೆಯಿಲ್ಲ. ಹೋಗಲಿ ಗ್ರಾಹಕರಿಗಾದರೂ ಅದರ ಪ್ರಯೋಜನ ಸಿಗುತ್ತಿದೆಯೇ ಅದೂ ಇಲ್ಲ.

ಮಾರುಕಟ್ಟೆಯಲ್ಲಿ ಅದರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಮಧ್ಯವರ್ತಿ ಹಣ ಮಾಡುತ್ತಿದ್ದಾನೆ ಎಂಬ ಅಸಮಾಧಾನ ರೈತರದ್ದು. ರಾಜ್ಯಕ್ಕೆ ತಮಿಳುನಾಡು ಹಾಗೂ ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಬಾಳೆ ಸರಬರಾಜು ಆಗುತ್ತಿದೆ. ಇದು ಸಹ ಬಾಳೆ ಬೆಲೆ ಕುಸಿಯಲು ಕಾರಣ. ಉತ್ತಮ ಬೆಲೆ ಇದೆ ಎಂಬ ಕಾರಣಕ್ಕೆ ಹೆಚ್ಚಾಗಿ ಬಾಳೆಯನ್ನೇ ಬೆಳೆದಿರುವ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !