ಮಂಗಳವಾರ, ಅಕ್ಟೋಬರ್ 22, 2019
22 °C

₹150 ಕೋಟಿ ಅನುದಾನ ವಾಪಸು: ಶಾಸಕರ ಅಸಮಾಧಾನ

Published:
Updated:
Prajavani

ದೇವನಹಳ್ಳಿ: ರಾಜಕೀಯ ಕ್ಷಿಪ್ರ ಬದಲಾವಣೆ ನಂತರ ಅಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನ ₹150 ಕೋಟಿ ಹಿಂಪಡೆದಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತ ಬಂದ ತಕ್ಷಣ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಅನುದಾನ ಹಿಂಪಡೆಯಲಾಗಿದೆ. ಆದರೆ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನದ ಕೊರತೆ ಇಲ್ಲ. ಸರ್ಕಾರದ ತಾರತಮ್ಯ ಧೋರಣೆ ಸರಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಪಕ್ಷಾತೀತವಾಗಿ ಎಲ್ಲ ಶಾಸಕರ ಕ್ಷೇತ್ರಗಳಿಗೆ ಸಮಾನವಾಗಿ ಅನುದಾನ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಮಾಡುತ್ತಾರೆ ಎಂಬ ನಿರೀಕ್ಷೆಯೂ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬೈಯಾಪ ಆಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿನ ಕೆರೆಗಳ ಅಭಿವೃದ್ಧಿಗೆ ₹30ಕೋಟಿ ಅನುದಾನದ ಕ್ರಿಯಾ ಯೋಜನೆ ರೂ‍ಪಿಸಲಾಗಿತ್ತು. ನವ ಬೆಂಗಳೂರು ಯೋಜನೆಯಡಿ ₹40ಕೋಟಿ, ಮುಖ್ಯಮಂತ್ರಿ ವಿಶೇಷ ಕೋಟಾದಲ್ಲಿ ₹38ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೂಲಸೌಲಭ್ಯ ಯೋಜನೆಯಡಿ ₹28ಕೋಟಿ, ಎರಡು ಪುರಸಭೆ ಅನುದಾನ, ಗ್ರಾಮೀಣ ನೈರ್ಮಲ್ಯ ಸುಧಾರಣೆ ಮತ್ತು ಕುಡಿಯುವ ನೀರಿನ ಯೋಜನೆ ಅನುದಾನ, ಎಸ್.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಹಿಂಪಡೆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶಾಸಕರಿಗೆ ಮೀಸಲಾಗಿರುವ ಹಣ ಹಿಂಪಡೆದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇದೆಯೇ ? ಯಾವುದೇ ಸರ್ಕಾರ ಶಾಶ್ವತವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ. ಸರ್ಕಾರದ ತಾರತಮ್ಯದ ವಿರುದ್ಧ ಜನಾಂದೋಲನ ನಡೆಸಲಾಗುತ್ತವುದು ಎಂದು ಎಚ್ಚರಿಕೆ ನೀಡಿದರು. ‌

ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಹಾಪ್ ಕಾಮ್ ನಿರ್ದೇಶಕ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಮುಖಂಡರಾದ ವೀರಪ್ಪ, ಗುರಪ್ಪ, ಆರ್.ಕೆ.ನಂಜೇಗೌಡ, ಎಸ್.ಎಲ್.ಎನ್ ಮುನಿರಾಜು, ಕಲ್ಯಾಣ್ ಕುಮಾರ್, ಭೀಮ್ ರಾಜ್ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)