ಮಂಗಳವಾರ, ಸೆಪ್ಟೆಂಬರ್ 17, 2019
24 °C
ಜಿಲ್ಲಾ ಸಹಕಾರ ಸಂಘದ ಮಹಾಸಭೆ

ರೈತರ ಸಾಲ ₹ 620 ಕೋಟಿ ಮನ್ನಾ 

Published:
Updated:
Prajavani

ದೇವನಹಳ್ಳಿ: ‘ಮೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಸಹಕಾರ ಸಂಘಗಳಲ್ಲಿ ಒಟ್ಟು ₹ 620 ಕೋಟಿ ಮೊತ್ತದಷ್ಟು ರೈತರ ಸಾಲ ಮನ್ನಾ ಮಾಡಲಾಗಿದೆ’ ಎಂದು ಜಿಲ್ಲಾ ಸಹಕಾರ ಸಂಘ ಕೇಂದ್ರ ಬ್ಯಾಂಕಿನ ನಿರ್ದೇಶಕ ಸೊಣ್ಣಪ್ಪ ತಿಳಿಸಿದರು.

ಇಲ್ಲಿನ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ ಸಹಕಾರ ಸಂಘಗಳಲ್ಲಿನ ರೈತರ ಸಾಲ ₹ 350 ಕೋಟಿ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಘೊಷಣೆಯಂತೆ ₹ 270 ಕೋಟಿ ಸಾಲ ಮನ್ನಾ ಆಗಿದೆ. ಈಗಾಗಲೇ ಋಣ ಮುಕ್ತ ಪ್ರಮಾಣ ಪತ್ರ ವಿತರಿಸಲಾಗಿದೆ' ಎಂದು ಹೇಳಿದರು.

‘ಸ್ವಸಹಾಯ ಮತ್ತು ಸ್ತ್ರಿಶಕ್ತಿ ಗುಂಪುಗಳಿಗೆ ಪ್ರಾಮಾಣಿಕತೆ ಇದೆ. ಸಕಾಲದಲ್ಲಿ ಸಾಲ ತಿರುವಳಿ ಮಾಡುತ್ತಾರೆ. ಇದನ್ನರಿತು ಜಿಲ್ಲಾ ಸಹಕಾರ ಸಂಘದ ವತಿಯಿಂದ ₹ 4 ಕೋಟಿಯನ್ನು ಈ ಸಂಘಗಳ ಮಹಿಳೆಯರಿಗೆ ನೀಡಲಾಗಿದೆ’ ಎಂದರು.

ನೀರಾವರಿ ಹೊಂದಿರುವ ರೈತರಿಗೆ ಪಶು ಸಾಕಾಣಿಕೆಗೆ ₹ 6 ಲಕ್ಷ ನೀಡಲಾಗುತ್ತದೆ. ಕೇವಲ ಶೇ 30 ಪೈಸೆ ಬಡ್ಡಿದರದಲ್ಲಿ ಮಾತ್ರ. ಕುರಿ ಕೋಳಿಗೂ ಸಾಲ ನೀಡುತ್ತಿದ್ದು ಯಾರೂ ಮುಂದೆ ಬರುತ್ತಿಲ್ಲ. ಗೃಹ ಲಕ್ಷ್ಮೀ ಯೋಜನೆ ಅಡಿ ಸಾಲ ನೀಡಲಾಗುತ್ತಿದೆ. ಕಾಯಕ ಯೋಜನೆ ಅಡಿ ಗೃಹ ಬಳಕೆ ವಸ್ತುಗಳ ತಯಾರಿಕೆಗೆ ₹ 5 ಲಕ್ಷದ ವರೆಗೆ ಶೂನ್ಯ ಬಡ್ಡಿದರ ಸಾಲ, ರೈತರಿಗೆ ಈ ಬಾರಿ ಒಂದು ಲಕ್ಷದ ವರೆಗೆ ಸಾಲ ನೀಡಲು ಅವಕಾಶವಿದೆ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಮಾತನಾಡಿ, ‘ಸಂಘ 2018–19ನೇ ಸಾಲಿನಲ್ಲಿ 1.33 ಲಕ್ಷ ಲಾಭಾಂಶ ವಿಲೇವಾರಿ ಮಾಡಲಾಗಿದೆ. ₹ 35.38 ಲಕ್ಷ ಷೇರು ಬಂಡವಾಳವಿದ್ದು 50 ಲಕ್ಷಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು ವಹಿವಾಟಿನ ಅದಾಯ 3.80 ಲಕ್ಷ ಪೈಕಿ 2.82 ಲಕ್ಷ ವೆಚ್ಚ ಮಾಡಲಾಗಿದೆ. 38 ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದ್ದು ಮತ್ತಷ್ಟು ಗುಂಪುಗಳಿಗೆ ಹೆಚ್ಚಳ ಮಾಡಬೇಕಾಗಿದೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಪ್ರಸ್ತುತ ಸಂಘದಲ್ಲಿ ಎ. ವರ್ಗದ 1,727, ಸಿ.ವರ್ಗದ 144 ಸದಸ್ಯರಿದ್ದಾರೆ. ಈ ಪೈಕಿ 212 ಸದಸ್ಯರು ಬೆಳೆಸಾಲ ಪಡೆದಿದ್ದಾರೆ. ವಾರ್ಷಿಕ ₹ 11.7 ಕೋಟಿ ಸಂಘದ ವಹಿವಾಟು ನಡೆಸಿದೆ. 1.51 ಕೋಟಿ ಸಂಘದಲ್ಲಿನ ರೈತ ಸದಸ್ಯರ ಸಾಲ ಮನ್ನಾ ಆಗಿದೆ. 2018–19ನೇ ಸಾಲಿನಲ್ಲಿ ಸಾಲ ವಸೂಲಾತಿ ಪ್ರಗತಿ ಶೇ 83.86ರಷ್ಟು ಆಗಿರುವುದು ಈ ಬರಗಾಲದಲ್ಲೂ ಹೆಗ್ಗಳಿಕೆ’ ಎಂದು ಹೇಳಿದರು.

ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಮುಖಂಡ ಕಾಮೇನಹಳ್ಳಿ ಕೆ.ರಮೇಶ್, ಸಂಘದ ನಿರ್ದೇಶಕ ಮಂಜುನಾಥ್ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಪಟಾಲಪ್ಪ, ನಿರ್ದೇಶಕರಾದ ಎನ್.ಮಂಜುನಾಥ್, ವಿ.ಮುನಿರಾಜ್, ಎಂ.ಲಕ್ಷಣ್, ಆರ್.ಕೆ.ರಾಮೇಗೌಡ, ಎನ್.ಚಿಕ್ಕಾಂಜಿನಪ್ಪ, ವೆಂಕಟಾಚಲ, ಅನ್ನಪೂರ್ಣ, ಮಂಗಳಮ್ಮ ,ಮುಖಂಡರಾದ ರಾಜಣ್ಣ, ರಾಮಣ್ಣ, ಬಾಲಕೃಷ್ಣ, ಶ್ರೀರಾಮಣ್ಣ, ಮುನಿರಾಜು ಇದ್ದರು.

Post Comments (+)