ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 1 ಎಕರೆ ಭೂಮಿ ಪ್ರಸ್ತಾವ: ಟಿ.ವೆಂಕಟರಮಣಯ್ಯ

7
ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ವಿವಿಧ ಘಟಕಗಳ ಉದ್ಘಾಟನೆ

ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 1 ಎಕರೆ ಭೂಮಿ ಪ್ರಸ್ತಾವ: ಟಿ.ವೆಂಕಟರಮಣಯ್ಯ

Published:
Updated:
Deccan Herald

ದೊಡ್ಡಬಳ್ಳಾಪುರ: ನಗರದ ಹೃದಯ ಭಾಗದ ತೋಟಗಾರಿಕಾ ಇಲಾಖೆ ಇರುವ ಸ್ಥಳದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಮಹಿಳಾ ಪ್ರಥಮ ದರ್ಜೆದು ಕಾಲೇಜಿಗೆ ಕಟ್ಟಡ ನಿರ್ಮಿಸಲು ಭೂಮಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಮಂಗಳವಾರ ಆಯೋಜಿಸಿದ್ದ 2018ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡೂ ಕಾಲೇಜುಗಳನ್ನು ತೋಟಗಾರಿಕೆ ಇಲಾಖೆ ಇರುವ ಸ್ಥಳದಲ್ಲಿಯೇ ಕಾರ್ಯನಿರ್ವಹಿಸುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ವಿದ್ಯಾರ್ಥಿಗಳು ಪೋಷಕರ ಪರಿಶ್ರಮವನ್ನು ಅರ್ಥ ಮಾಡಿಕೊಂಡು ಉನ್ನತ ಸ್ಥಾನಗಳಿಗೆ ಹೋಗಲು ಪ್ರಯತ್ನಿಸಬೇಕು. ತಾಲ್ಲೂಕಿನಲ್ಲಿ ಐದು ವರ್ಷಗಳಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದರು.

ಪದವಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಭಿವೃದ್ಧಿ ಪರವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಲು ಚಿಂತನೆ ನಡೆಸಬೇಕು ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಸರ್ಕಾರ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು. ಸಮಾಜಕ್ಕೆ ನೀಡಬೇಕಾದ ಕೊಡುಗೆಯ ಕುರಿತು ತಮ್ಮ ಮೇಲಿರುವ ಜವಾಬ್ದಾರಿ ಏನೆಂಬುದನ್ನು ಅರಿತು ವಿದ್ಯಾರ್ಜನೆ ನಡೆಸಬೇಕು ಎಂದರು.

ಪ್ರತಿ ವರ್ಷ ಸರ್ಕಾರ 20 ಸಾವಿರ ಕೋಟಿ ಅನುದಾನ ಮೀಸಲಿಡುತ್ತಿದೆ. ಗುಣಮಟ್ಟದ ಶಿಕ್ಷಣವನ್ನು ದೊರಕಿಸಲು ಅನೇಕ ಕಾರ್ಯಕ್ರಮಗಳ ಮೂಲಕ ವೆಚ್ಚ ಮಾಡುತ್ತಿದೆ. ಇಷ್ಟು ಪ್ರಮಾಣದ ಹಣವನ್ನು ವಿದ್ಯಾರ್ಥಿಗಳಿಗೆ ವೆಚ್ಚ ಮಾಡುತ್ತಿದ್ದರೂ ವಿದ್ಯಾರ್ಥಿಗಳು ಸರ್ಕಾರದ ಆಶಯಗಳಿಗೆ ತಕ್ಕಂತೆ ಫಲಿತಾಂಶ ದೊರಕಿಸಲು ವಿಫಲವಾಗುತ್ತಿರುವುದು ಬೇಸರದ ಸಂಗತಿ ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನೀಡಬೇಕೆಂದು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶಾಸಕರಲ್ಲಿ ಮನವಿ ಮಾಡಿದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ, ಪ್ರಾಂಶುಪಾಲ ಪ್ರೊ.ಎನ್.ಡಿ.ಸುರೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ವಿಜಯ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಸ್. ಪ್ರಸನ್ನಕುಮಾರ್, ಎನ್‍ಎಸ್‍ಎಸ್ ಸಂಚಾಲಕ ಎಚ್.ನಂಜಪ್ಪ, ಯುವ ರೆಡ್ ಕ್ರಾಸ್ ಘಟಕದ ಡಾ.ರಂಗನಾಥ್, ಪ್ಲೇಸ್ ಮೆಂಟ್ ಸಮಿತಿಯ ಭಾರತಿ ಶ್ಯಾಮರಾಜ್, ಐಕ್ಯೂ ಎಸಿ ಎಸ್.ವಿ.ದಿವ್ಯಶ್ರೀ, ಉಪನ್ಯಾಸಕ ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !