ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಮನೆ ಜಲಾವೃತ; ಜನಜೀವನ ಅಸ್ತವ್ಯಸ್ತ

ಆನೇಕಲ್‌ ಚಿಕ್ಕಕೆರೆ ನೀರು ಸೃಷ್ಟಿಸಿದ ಅವಾಂತರ l ದಿನಸಿ, ಬಟ್ಟೆ, ಮಕ್ಕಳ ಪಠ್ಯಪುಸ್ತಕ ನೀರುಪಾಲು
Last Updated 21 ಅಕ್ಟೋಬರ್ 2022, 6:21 IST
ಅಕ್ಷರ ಗಾತ್ರ

ಆನೇಕಲ್:ಮಳೆಯಿಂದ ಪಟ್ಟಣದ ಚಿಕ್ಕಕೆರೆ ತುಂಬಿದೆ. ಇದಕ್ಕೆ ಹೊಂದಿಕೊಂಡಿರುವ ನಾರಾಯಣ ಪುರದ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ.

ನಾರಾಯಣಪುರದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳಿವೆ. ಈ ಪೈಕಿ 100ಕ್ಕೂ ಹೆಚ್ಚು ಕುಟುಂಬಗಳು ಕೆರೆ ಸಮೀಪದಲ್ಲಿಯೇ ಇವೆ. ಕೆರೆ ತುಂಬಿದಾಗ ನೀರು ರಾಜಕಾಲುವೆ ಮೂಲಕ ಹರಿದು ದೊಡ್ಡ ಕೆರೆಗೆ ಹರಿದು ಹೋಗುತ್ತದೆ. ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ಮನೆಗಳು ಜಲಾವೃತಗೊಂಡಿವೆ.

ಹಲವು ವರ್ಷಗಳಿಂದ ನಾರಾಯಣಪುರದಲ್ಲಿ ಸೂರು ಕಟ್ಟಿಕೊಂಡು ಜೀವಿಸುತ್ತಿದ್ದ ಕುಟುಂಬಗಳು ಮಳೆಯಿಂದ ಬೀದಿಗೆ ಬಿದ್ದಿವೆ. ಮನೆಯಲ್ಲಿದ್ದ ದಿನಸಿ, ಬಟ್ಟೆ, ಸಾಮಗ್ರಿಗಳು ನೀರು ಪಾಲಾಗಿವೆ. ವಿದ್ಯಾರ್ಥಿಗಳ ನೋಟ್‌ ಬುಕ್‌ ಸೇರಿದಂತೆ ಕಲಿಕಾ ಪರಿಕರಗಳು ತೊಯ್ದು ಹೋಗಿವೆ. ಮಕ್ಕಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅಲವತ್ತುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.

ನೀರು ನುಗ್ಗಿದ್ದರಿಂದ ಮನೆಗಳಲ್ಲಿನ ಸಾಮಗ್ರಿಗಳನ್ನು ಬೀದಿಯಲ್ಲಿ ಹಾಕಿಕೊಂಡು ಮುಂದೇನು ಎಂಬ ಚಿಂತೆಯಲ್ಲಿ ಕುಟುಂಬದ ಸದಸ್ಯರು ಕುಳಿತಿದ್ದರು. ಕೆಲಸಕ್ಕೆ ಹೋಗದೆ ಸಾಮಗ್ರಿಗಳನ್ನು ರಕ್ಷಿಸುವಲ್ಲಿ ನಿರತರಾಗಿದ್ದರು. ರಾತ್ರಿಯಿಡೀ ಸುರಿದ ಮಳೆಯಿಂದ ಈ ಭಾಗದ ಜನರ ಬದುಕು ಹೈರಾಣಾಗಿದೆ. ಹಲವು ಕುಟುಂಬಗಳು ಮನೆಗಳನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರವಾಗುತ್ತಿವೆ.

‘ಹಲವು ವರ್ಷಗಳಿಂದ ನಾರಾಯಣಪುರದಲ್ಲಿ ವಾಸವಾಗಿದ್ದೆವು. ಮಳೆಯಿಂದ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಮಾಡಿ ಬದುಕು ನಡೆಸುತ್ತಿದ್ದ ನಮ್ಮ ಜೀವನದ ಗತಿಯೇನು ಎಂಬ ಚಿಂತೆ ಕಾಡುತ್ತಿದೆ’ ಎಂದು ನಿವಾಸಿಗಳಾದ ರತ್ನಮ್ಮ, ಸರೋಜಮ್ಮ ಅಳಲು ತೋಡಿಕೊಂಡರು.

6ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದ ವೆಂಕಟಲಕ್ಷ್ಮೀ ಮತ್ತು ಪವಿತ್ರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆವು. ಮಳೆಯಿಂದಾಗಿ ಪುಸ್ತಕ, ಸಮವಸ್ತ್ರ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ನೀರು ಪಾಲಾಗಿವೆ ಎಂದರು.

ಮನೆ ಕುಸಿತ:ವೀವರ್ಸ್‌ ಕಾಲೊನಿಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಸ್ಥಳಕ್ಕೆ ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು. ಮಳೆ ಹೆಚ್ಚಾಗಿರುವುದರಿಂದ ಹಲವೆಡೆ ಸಮಸ್ಯೆ ಉಂಟಾಗಿದೆ’ ಎಂದರು.

ಪುರಸಭಾ ಸದಸ್ಯ ರಾಜಪ್ಪ ಮಾತನಾಡಿ, ‘ನಾರಾಯಣಪುರದಲ್ಲಿ ಮಳೆ ಬಂದರೆ ಪದೇ ಪದೇ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ವಾಸಿಸುತ್ತಿರುವವರು ಬಡವರಾಗಿದ್ದಾರೆ. ಅವರಿಗೆ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಳೆ ನೀರು ನಮ್ಮ ಭವಿಷ್ಯವನ್ನು ಹಾಳು ಮಾಡಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೆವು. ಮಳೆಯಿಂದ ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ನೀರು ಪಾಲಾಗಿವೆ. ಪ್ರತಿ ಬಾರಿ ಮಳೆ ಬಂದಾಗ ನಾರಾಯಣಪುರದಲ್ಲಿ ಇದೇ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ನೊಂದ ಹಲವಾರು ಕುಟುಂಬಗಳು ಬಾಡಿಗೆ ಮನೆಗೆ ಸ್ಥಳಾಂತರವಾಗುತ್ತಿವೆ’ ಎಂದು ಮಹದೇವಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT