ಬುಧವಾರ, ಅಕ್ಟೋಬರ್ 16, 2019
21 °C
ವಿವಿಧ ಇಲಾಖೆಗಳ ಪ್ರಥಮ ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಪರಿಶಿಷ್ಟರ ಅಭಿವೃದ್ಧಿಗೆ ₹ 11. 89 ಕೋಟಿ

Published:
Updated:
Prajavani

ದೇವನಹಳ್ಳಿ: ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಮತ್ತು ಅರ್ಹರ ವಿವಿಧ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ₹ 11.89 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿನ ಮೇಲ್ವಿಚಾರಣೆ ಸಮಿತಿ ವತಿಯಿಂದ ನಡೆದ ವಿವಿಧ ಇಲಾಖೆಗಳ ಪ್ರಥಮ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರಸ್ತುತ ದೇವನಹಳ್ಳಿ ತಾಲ್ಲೂಕಿಗೆ ₹ 83 ಲಕ್ಷ ಅನುದಾನ ಬಂದಿದೆ. ವಿದ್ಯಾರ್ಥಿ ವೇತನಕ್ಕಾಗಿ ₹ 37 ಲಕ್ಷ, ಅಂತರ್ಜಾತಿ ವಿವಾಹಕ್ಕೆ ₹ 32 ಲಕ್ಷ ವೆಚ್ಚ ಮಾಡಲಾಗಿತ್ತು. ಉಳಿಕೆ ಮೊತ್ತಕ್ಕೆ ವಿದ್ಯಾರ್ಥಿ ನಿಲಯಗಳಲ್ಲಿ ಇತರೆ ಪರಿಕರ ವಿತರಿಸಲಾಗಿದೆ ಎಂದು ಹೇಳಿದರು.

ಅರಣ್ಯ ಉಪ ವಲಯಾಧಿಕಾರಿ ರೆಹಮಾನ್‌ ಮಾಹಿತಿ ನೀಡಿ, 2016–17 ನೇ ಸಾಲಿನಲ್ಲಿ 100 ಫಲಾನುಭವಿಗಳಿಗೆ ಸೌರದೀಪ, ಒಬ್ಬರಿಗೆ ಸೌರಹೀಟರ್ ನೀಡಲಾಗಿದೆ. 356 ಮಂದಿಗೆ ಅಡುಗೆ ಅನಿಲ ಉಪಕರಣ ವಿತರಿಸಲಾಗಿದೆ. 2018–19 ರಿಂದ ಈವರೆಗೆ ಯಾವುದೆ ಅನುದಾನ ಪರಿಶಿಷ್ಟರಿಗೆ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹೇಮಾವತಿ ಮಾಹಿತಿ ನೀಡಿ, ಎಸ್.ಸಿ.ಎಸ್.ಪಿ ಯೋಜನೆಯಡಿ 3 ಕೋಟಿ, ಟಿ.ಎಸ್.ಪಿ. ಯೋಜನೆಯಡಿ ₹ 39 ಲಕ್ಷ ಅನುದಾನ ಬಿಡುಗಡೆಯಾಗಿದೆ. ತಾಲ್ಲೂಕಿನಲ್ಲಿ 1 ರಿಂದ 6 ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿ ಸೇರಿ ಒಟ್ಟು 4226 ಫಲಾನುಭವಿಗಳು ಇದ್ದಾರೆ. ಈ ಪೈಕಿ 246 ಗರ್ಭಿಣಿಯರು, 1756 ಪರಿಶಿಷ್ಟ ಪಂಗಡವರಿದ್ದಾರೆ, ಎಸ್.ಸಿ.ಎಸ್.ಪಿ ಯೋಜನೆಯಡಿ ಶೇ.81 ರಷ್ಟು ಟಿ.ಎಸ್.ಪಿ ಯೋಜನೆಯಡಿ ಶೇ.48 ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೂರಕ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ ಮತ್ತು ಎಸ್ಸಿ ಮತ್ತು ಎಸ್ಟಿ ಸಮುದಾಯದ ಒಟ್ಟು 82 ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗೌರವಧನ ಈ ಅನುದಾನದಿಂದ ಭರಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಮಾನಸ ಮಾಹಿತಿ ನೀಡಿ, ಕೃಷಿ ಇಲಾಖೆಗೆ ವಿವಿಧ ಯೋಜನೆಯಡಿ ₹ 82.20 ಲಕ್ಷ ಅನುದಾನ ಬಂದಿದ್ದು ಈಗಾಗಲೇ ಅರ್ಹ ಫಲಾನುಭವಿಗಳಿಗೆ ಜಿಪ್ಸಂ ಬೋರಾನ್ ಲಘು ಪೋಷಕ ಗೊಬ್ಬರ, ಎರೆ ಹುಳು ಗೊಬ್ಬರ, ಕ್ರಿಮಿನಾಶಕ ವಿತರಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ. ಮುರುಡಯ್ಯ ಮಾತನಾಡಿ, ಮೇಲ್ವಿಚಾರಣಾ ಪ್ರಗತಿ ಪರಿಶೀಲನಾ ಮೊದಲ ಸಭೆ ಇದಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಿನ ಸಭೆಗೆ ಪೂರಕ ಮಾಹಿತಿಯೊಂದಿಗೆ ಬರಬೇಕು, ಮಾಹಿತಿ ಇಲ್ಲದಿದ್ದರೆ ಗೊಂದಲವಾಗಲಿದೆ ಎಂದು ಹೇಳಿದರು.

ಮೇಲ್ವಿಚಾರಣಾ ಸಮಿತಿ ಸದಸ್ಯ ಗೋಪಾಲಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Post Comments (+)