ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಎಸಿಬಿಗೆ 17 ದೂರಿನ ಅರ್ಜಿ ಸಲ್ಲಿಕೆ

Last Updated 26 ಆಗಸ್ಟ್ 2021, 9:13 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ 17 ದೂರಿನ ಅರ್ಜಿಗಳು ಸಲ್ಲಿಕೆಯಾಗಿವೆ.

ಕಂದಾಯ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಯಲ್ಲಿನ ಸಮಸ್ಯೆಗಳಿಗೆ ಸಂಬಂಧಪಟ್ಟ ದೂರಿನ ಅರ್ಜಿಗಳು ಸಲ್ಲಿಕೆಯಾಗಿವೆ.ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸಕ್ಕಾಗಿ ಬಂದರೂ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕ, ಶಿರಸ್ತೇದಾರ್, ಆರ್.ಆರ್.ಟಿ. ಶಿರಸ್ತೇದಾರ್ ಹೀಗೆ ಪ್ರತಿಯೊಬ್ಬರಿಗೂ ಲಂಚ ನೀಡದೆ ಯಾವ ಕೆಲಸಗಳೂ ಆಗುತ್ತಿಲ್ಲ ಎಂದು ದೂರುದಾರರು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಸೈನಿಕ ಮಹೇಂದ್ರ ಆರ್.ಟಿ. ಅವರು, ‘ನನ್ನ ತಂದೆ ಆರ್.ಎಂ. ತಿಮ್ಮೇಗೌಡ ಅವರ ಹೆಸರಿನಲ್ಲಿರುವ ಜಮೀನನ್ನು ನನ್ನ ಹಾಗೂ ನಮ್ಮ ಅಣ್ಣನ ಮಗನ ಹೆಸರಿಗೆ ವರ್ಗಾವಣೆ ಮಾಡುವಂತೆ ವಿಲ್ ರಿಜಿಸ್ಟರ್ ಮಾಡಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ಆದೇಶ ಮಾಡಿದ್ದಾರೆ. ಕಂದಾಯ ಇಲಾಖೆಯ ಉಪ ತಹಶೀಲ್ದಾರ್‌ರಿಂದ ಪರಿಶೀಲನೆಗೊಂಡು ಚೆಕ್ ಲಿಸ್ಟ್ ಆಗಿದೆ. ಭೂಮಿ ವಿಭಾಗದಿಂದ ಗ್ರಾಮ ಲೆಕ್ಕಾಧಿಕಾರಿಗೆ ಹೋಗಿದೆ. ಅವರು ಉದ್ದೇಶಪೂರ್ವಕವಾಗಿ ಕೆಲವು ದಾಖಲೆಗಳಿಲ್ಲ ಎಂದು ವಿಳಂಬ ಮಾಡುತ್ತಿದ್ದಾರೆ’ ಎಂದು ದೂರು ನೀಡಿದರು.

ಬೈರಾಪುರದ ಕೊಂಡಪ್ಪ, ವಿಜಯಪುರ ಪುರಸಭೆಯಲ್ಲಿ ನಿವೇಶನವೊಂದರ ಖಾತೆ ಮಾಡಿದ್ದು, ಇ–ಸ್ವತ್ತು ಖಾತೆ ಮಾಡಿಕೊಡುತ್ತಿಲ್ಲ ಎಂದು ದೂರು ನೀಡಿದರು.

‘ಯಾವುದೇ ಸರ್ಕಾರಿ ನೌಕರ ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಭ್ರಷ್ಟಾಚಾರ ನಿಗ್ರಹ ದಳದಪೊಲೀಸ್‌ ಠಾಣೆಗೆ ದೂರು ನೀಡಬೇಕು’ ಎಂದುಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ಜಗದೀಶ್ ಹೇಳಿದರು.

ಸಾರ್ವಜನಿಕರಿಗೆ ಕಾನೂನುಬದ್ಧವಾಗಿ ಲಂಚಮುಕ್ತ ಕೆಲಸ ಮಾಡಿಕೊಡಲು ಯಾವುದೇ ಸರ್ಕಾರಿ ನೌಕರರು ಅಥವಾ ಖಾಸಗಿ ಏಜೆಂಟರು, ಮಧ್ಯವರ್ತಿಗಳು ವಿಳಂಬ ಮಾಡಿದರೆ ಅಂತಹವರ ವಿರುದ್ಧ ದೂರು ದಾಖಲಿಸಲು ಅವಕಾಶವಿದೆ. ಸಾರ್ವಜನಿಕರ ಕೆಲಸಕ್ಕಾಗಿ ಲಂಚ ಪಡೆಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಲಂಚಕ್ಕಾಗಿ ಸಾರ್ವಜನಿಕ ಕೆಲಸವನ್ನು ವಿಳಂಬ ಮಾಡುವುದು, ಸಾರ್ವಜನಿಕ ಹುದ್ದೆಬಳಸಿಕೊಂಡು ಬೇರೆ ರೀತಿಯ ಅವ್ಯವಹಾರ ನಡೆಸುವುದು ಅಥವಾ ಅಕ್ರಮ ಆಸ್ತಿ ಗಳಿಸುವುದುಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಅಪರಾಧವಾಗಿದೆ ಎಂದು ತಿಳಿಸಿದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ಎಸಿಬಿ ಠಾಣೆಗೆ ದೂರು ಕೊಡಬಹುದು. ಅಗತ್ಯ ಬಿದ್ದಲ್ಲಿ ದೂರುದಾರರಹೆಸರನ್ನು ಗೋಪ್ಯವಾಗಿಡಲಾಗುವುದು
ಎಂದರು.

‌ಪೊಲೀಸ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಸಂತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ವಿಜಯಪುರಯ ಪುರಸಭೆ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್ ಕುಮಾರ್, ಕುಡಿಯುವ ನೀರು ವಿಭಾಗದ ಎಇಇ ಸೋಮಶೇಖರ್ , ಕಾರ್ಮಿಕ ಇಲಾಖೆಯ ನಿರೀಕ್ಷಕಿ ಅಂಬಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT