ಮಂಗಳವಾರ, ಅಕ್ಟೋಬರ್ 15, 2019
29 °C
ವಿಜಯದಶಮಿ ಅಂಗವಾಗಿ ಸ್ಪರ್ಧೆ ಆಯೋಜನೆ, ದೇಸಿ ಕಲೆ ಬಗ್ಗೆ ಅರಿವು ಮೂಡಿಸಲು ಸಲಹೆ

‘ರಂಗೋಲಿಗೆ 5 ಸಾವಿರ ವರ್ಷಗಳ ಇತಿಹಾಸ’

Published:
Updated:
Prajavani

ವಿಜಯಪುರ: ‘ರಂಗೋಲಿ ಬಿಡಿಸುವುದು ಭಾರತೀಯ ಸಂಪ್ರದಾಯವಾಗಿದೆ. ಇದನ್ನು ಒಂದು ಆಚರಣೆಯಾಗಿ ಮಾಡುವುದರಿಂದ ಮಹಿಳೆಯರನ್ನು ಸಂಘಟಿಸಲು ಸಹಕಾರಿಯಾಗುವುದರ ಜೊತೆಗೆ ಅವರಲ್ಲಿ ದೇಸಿ ಕಲೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ’ ಎಂದು ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದ ಶ್ರೀದೇಶನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ರಂಗೋಲಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂ ನಾಗರಿಕತೆಯಲ್ಲಿ ಅಲ್ಲಿನ ಜನರು ರಂಗೋಲಿ ಬಿಡಿಸುತ್ತಿದ್ದರು. ಅವರಲ್ಲಿ ಉತ್ತಮ ಕೌಶಲಗಳಿದ್ದವು. ರಂಗೋಲಿ ಬಿಡಿಸುವುದು ಒಂದು ವಿಶಿಷ್ಟ ಕಲೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯವದರೆಗೂ ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ಮಹತ್ವ ನೀಡಲಾಗಿದೆ. ಇಂತಹ ವಿಶಿಷ್ಟವಾದ ಕಲೆಯನ್ನು ಉಳಿಸಿಕೊಂಡು ಹೋಗಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ‘ಮಹಿಳೆಯರಲ್ಲಿ ಸಹನೆ, ತಾಳ್ಮೆ, ಏಕಾಗ್ರತೆ ಹೆಚ್ಚು. ಹಾಗಾಗಿ ರಂಗೋಲಿ ಹಾಕುವ ಕಲೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿದೆ. ಚುಕ್ಕೆಯಿಂದ ಚುಕ್ಕೆಗೆ ಗೆರೆಗಳನ್ನು ಸೇರಿಸುವ ರೀತಿ ಆರಂಭವಾಗುವ ರಂಗೋಲಿ, ಜೀವನದಲ್ಲಿನ ಎದುರಾಗುವಂತಹ ಎಲ್ಲ ಘಟ್ಟಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದು ಎಂಬ ಸತ್ಯ ಕಲಿಸುತ್ತದೆ. ಬುದ್ಧಿ ಚುರುಕಾಗುತ್ತದೆ. ಆದ್ದರಿಂದ ಮಹಿಳೆಯರು ಇಂತಹ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಸ್ಪರ್ಧೆಯಲ್ಲಿ ಶಶಿಕಲಾ ಪ್ರಥಮ ಬಹುಮಾನ, ಧನುಶ್ರೀ, ಕಲಾವತಿ ಸುಬ್ರಮಣಿ ದ್ವಿತೀಯ ಬಹುಮಾನ, ಕೋಮಲಾ, ಪವಿತ್ರ, ವರ್ಷ ತೃತೀಯ ಬಹುಮಾನ ಪಡೆದರು. ಖಾದಿ ಬೋರ್ಡ್ ಅಧ್ಯಕ್ಷ ಲಕ್ಷ್ಮಣ್‌ ಮೂರ್ತಿ, ಯುವ ಮುಖಂಡ ಮಾರುತಿ, ಹಿತ್ತರಹಳ್ಳಿ ರಮೇಶ್, ಅಬಿದಾಭಾನು, ಸನಾವುಲ್ಲಾ, ಶಾರದಮ್ಮ ಸೀನಪ್ಪ, ಶಂಷದ್‌ ಬೇಗಂ ಅಥಾವುಲ್ಲಾ, ನಟರಾಜ್, ರಿಜ್ವಾನ್, ನಜೀರ್, ಅಹಮದ್, ಚಂದ್ರಶೇಖರ್, ಶ್ರೀನಿವಾಸ್, ರಾಮಾಂಜಿನೇಯದಾಸ್, ಪ್ರಭಾಕರ್, ಪಿಡಿಒ ರಾಜಗೋಪಾಲರೆಡ್ಡಿ, ಶ್ರೀನಿವಾಸ್, ಮನೋಜ್, ವೆಂಕಟೇಶ್ ಇದ್ದರು.

Post Comments (+)