‘6 ತಿಂಗಳಿಂದ ಉರಿಯದ ಹೈಮಾಸ್ಟ್ ದೀಪ’

ಗುರುವಾರ , ಮಾರ್ಚ್ 21, 2019
25 °C

‘6 ತಿಂಗಳಿಂದ ಉರಿಯದ ಹೈಮಾಸ್ಟ್ ದೀಪ’

Published:
Updated:
Prajavani

ವಿಜಯಪುರ: ಇಲ್ಲಿನ ಬಸ್ ನಿಲ್ದಾಣ, ಪುರಸಭಾ ಮುಂಭಾಗ, ಕೋಲಾರ ರಸ್ತೆಯ ಗಣಪತಿ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯದ ಬೀದಿಗೆ ಹೋಗುವ ದ್ವಾರದ ಬಳಿಯಲ್ಲಿ ಅಳವಡಿಸಿರುವ ಹೈ ಮಾಸ್ಟ್ ದೀಪಗಳು ಆರು ತಿಂಗಳುಗಳಿಂದ ಉರಿಯುತ್ತಿಲ್ಲ. ಇದುವರೆಗೂ ಅವುಗಳ ಕಡೆಗೆ ಗಮನಹರಿಸಿಲ್ಲ ಎಂದು ಸ್ಥಳೀಯ ನಿವಾಸಿ ನಾಗೇಶ್ ಆರೋಪಿಸಿದ್ದಾರೆ.

ನಗರದಲ್ಲಿ ಜನಸಂದಣಿ ಹೆಚ್ಚಾಗಿರುವ ಕಡೆಗಳಲ್ಲಿ ಹೈ ಮಾಸ್ಟ್‌ ವಿದ್ಯುತ್ ದೀಪಗಳನ್ನು ಪುರಸಭೆಯಿಂದ ಅಳವಡಿಸಿದ್ದಾರೆ. ಇವುಗಳ ನಿರ್ವಹಣೆಗಾಗಿ ದೊಡ್ಡಬಳ್ಳಾಪುರದ ಗುತ್ತಿಗೆದಾರರಿಗೆ ಗುತ್ತಿಗೆಯನ್ನೂ ಕೊಟ್ಟಿದ್ದಾರೆ. ಆದರೆ ಲೈಟ್‌ಗಳು ಉರಿಯುತ್ತಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದಿದ್ದಾರೆ.

‘ಸಂಜೆ 6 ಗಂಟೆಯಾಗುತ್ತಿದ್ದಂತೆ ಬಸ್ ನಿಲ್ದಾಣದ ಸುತ್ತ ತೀವ್ರವಾಗಿ ಕತ್ತಲೂ ಆವರಿಸಿಕೊಳ್ಳುತ್ತಿದೆ. ಕೇವಲ ಅಂಗಡಿಗಳಿಂದ ಬರುವ ಬೆಳಕು, ವಾಹನಗಳಿಂದ ಬರುವ ಬೆಳಕಿನಲ್ಲೇ ನಾವು ಇಲ್ಲಿ ಜೀವಿಸಬೇಕಾಗಿದೆ’ ಎನ್ನುತ್ತಾರೆ.

ಸಾಕಷ್ಟು ಮಂದಿ ಮಹಿಳೆಯರು ಯಲಹಂಕ, ದೊಡ್ಡಬಳ್ಳಾಪುರ, ಸೇರಿದಂತೆ ಅನೇಕ ಕಡೆಗಳಿಗೆ ಗಾರ್ಮೆಂಟ್ಸ್‌ಗಳಿಗೆ ಹೋಗಿ ಸಂಜೆ ಏಳು ಗಂಟೆಯ ನಂತರ ಬಸ್ಸುಗಳಲ್ಲಿ ಬಂದು ಇಳಿದು ನಡೆದುಕೊಂಡು ಹೋಗುತ್ತಾರೆ. ಹಿಂದೆ ಹಾಡಹಗಲೇ ಸರಗಳ್ಳತನಗಳು ಈ ಭಾಗದಲ್ಲಿ ಆಗಿವೆ. ರಾತ್ರಿಯ ವೇಳೆಗಳಲ್ಲಿ ಅಂತಹ ಘಟನೆಗಳು ನಡೆದರೆ ಯಾರು ಹೊಣೆ, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದಾರೆ.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ‘ನಗರದಲ್ಲಿ ಎಂಟು ಕಡೆಗಳಲ್ಲಿ ಇಂತಹ ದೀಪಗಳನ್ನು ಅಳವಡಿಸಲಾಗಿದೆ. ನಿರ್ವಹಣೆ ಮಾಡಲಿಕ್ಕೆ ಹಿಂದೆ ದೊಡ್ಡಬಳ್ಳಾಪುರದವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ನಿರ್ವಹಣೆ ಮಾಡಲಿಕ್ಕೆ ಮೂರು ವರ್ಷದ ಹಣ ₹ 70 ಲಕ್ಷ ಕೊಡಬೇಕು. ಕೆಲವು ಕಡೆಗಳಲ್ಲಿ ಎರಡು ಲೈಟ್‌ಗಳು ಉರಿಯುತ್ತವೆ. ಕೆಲವು ಕಡೆಗಳಲ್ಲಿ ಒಂದೂ ಉರಿಯುತ್ತಿಲ್ಲ. ನಾವೂ ಹೊಸದಾಗಿ ಖರೀದಿ ಮಾಡುವಂತಿಲ್ಲ, ಅದೆಲ್ಲಾ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಗಿ ಖರೀದಿ ಮಾಡುತ್ತಾರೆ. ಟೆಂಡರ್ ಶುರುವಾಗಿತ್ತು. ನೀತಿ ಸಂಹಿತೆ ಜಾರಿಯಾಗಿದ್ದರಿಂದ ವಿಳಂಬವಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !