ಬುಧವಾರ, ಆಗಸ್ಟ್ 10, 2022
23 °C
ಘಾಟಿ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಏಳು ಜೋಡಿಗೆ ಕಂಕಣ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ವತಿಯಿಂದ ಮುಜರಾಯಿ ಇಲಾಖೆಯ ಸಪ್ತಪದಿ ಯೋಜನೆಯಡಿ ಉಚಿತ ಸಾಮೂಹಿಕ ವಿವಾಹ ಗುರುವಾರ ನೆರವೇರಿತು.

ಏಪ್ರಿಲ್ ತಿಂಗಳಿನಲ್ಲಿಯೇ ನಡೆಯಬೇಕಿದ್ದು ಈ ವಿವಾಹ ಕಾರ್ಯಕ್ರಮವನ್ನು ಕೋವಿಡ್‌–19 ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಕೋವಿಡ್ ಮಾರ್ಗಸೂಚಿಯೊಂದಿಗೆ ನೆರವೇರಿತು. ಗ್ರಾಮ ಪಂಚಾಯಿತಿ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ.

ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಸರಳವಾಗಿ ನಡೆದ ವಿವಾಹದಲ್ಲಿ 7 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದರಲ್ಲಿ ಮುನಿಕೃಷ್ಣ-ಸುಜಾತಾ ಅಂಗವಿಕಲ ಜೋಡಿ ವಿವಾಹವಾಗಿದ್ದು ವಿಶೇಷವಾಗಿತ್ತು.

ಮೂರು ಜೋಡಿಗಳು ಅಂತರ್‌ ಜಾತಿ ವಿವಾಹವಾದರು. ಬೆಳಿಗ್ಗೆ 11.30ಯಿಂದ 12.40ರವರೆಗೆ ಅಭಿಜಿನ್ ಮುಹೂರ್ತದಲ್ಲಿ ದೇವಾಲಯದ ಪ್ರಧಾನ ಅರ್ಚಕ ಗುರುರಾಜಶರ್ಮ ನೇತೃತ್ವದ ಅರ್ಚಕರ ತಂಡ ಹಿಂದೂ ಧರ್ಮದ ವಿವಾಹ ಆಚರಣೆಯಂತೆ ಸಾಮೂಹಿಕ ವಿವಾಹ ಕಾರ್ಯವನ್ನು ನೆರವೇರಿಸಿತು. ವಿವಾಹದ ನಂತರ ವಧು–ವರರು ಹಾಗೂ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

‘ಸರ್ಕಾರದ ಸರಳ ಸಾಮೂಹಿಕ ವಿವಾಹಗಳು ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿವೆ. ವಿವಾಹವಾಗುವ ವರನಿಗೆ ವಸ್ತ್ರ ಹಾಗೂ ಹೂವಿನ ಹಾರಕ್ಕಾಗಿ ₹ 5 ಸಾವಿರ, ವಧುವಿಗೆ ಧಾರೆ ಸೀರೆ, ವಸ್ತ್ರ, ಹೂವಿನ ಹಾರಕ್ಕಾಗಿ ₹ 10 ಸಾವಿರ ಹಾಗೂ ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು ಸೇರಿ ವಧು-ವರರಿಗೆ ₹ 55 ಸಾವಿರ ನೆರವನ್ನು ದೇವಾಲಯದ ವತಿಯಿಂದ ಭರಿಸಲಾಗುತ್ತಿದೆ’ ಎಂದು ಮುಜರಾಯಿ ತಹಶೀಲ್ದಾರ್ ಜಿ.ಜೆ. ಹೇಮಾವತಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ. ನಾಯಕ್, ತಹಶೀಲ್ದಾರ್ ಟಿ.ಎಸ್. ಶಿವರಾಜ್, ಘಾಟಿ ಸುಬ್ರಹ್ಮಣ್ಯಸ್ವಾಮಿ ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಎನ್‌. ಕೃಷ್ಣಪ್ಪ, ಅಧೀಕ್ಷಕ ರಘು ಉಚ್ಚಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು