ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

782 ಜಾನುವಾರು ಗುಣಮುಖ

ಚರ್ಮಗಂಟು ತಡೆ: ಜಿಲ್ಲೆಯ 52,494 ರಾಸುಗಳಿಗೆ ಲಸಿಕೆ ಪೂರ್ಣ
Last Updated 20 ಅಕ್ಟೋಬರ್ 2022, 5:43 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ 1,62,000 ಜಾನುವಾರುಗಳ ಪೈಕಿ 1,044 ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ 782 ರಾಸುಗಳು ಗುಣಮುಖವಾಗಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಜಿ.ಎಂ. ನಾಗರಾಜ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಈವರೆಗೆ 52,494 ರಾಸುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲಾಗಿದೆ. ಅ. 17ರಿಂದ ಪಶುಪಾಲನಾ ಇಲಾಖೆ ಮತ್ತು ಬೆಂಗಳೂರು ಹಾಲು ಒಕ್ಕೂಟದಿಂದ ಮುಂಜಾಗ್ರತಾ ಕ್ರಮವಾಗಿ ಈ ರೋಗ ಕಾಣಿಸಿಕೊಂಡ 5 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಚರ್ಮಗಂಟು ರೋಗದಿಂದ ಮರಣ ಹೊಂದಿದ ಪ್ರತಿ ಹಸುವಿಗೆ ₹ 20 ಸಾವಿರ, ಎತ್ತು, ಹೋರಿಗಳಿಗೆ ₹ 30 ಸಾವಿರ ಮತ್ತು ಕರುಗಳಿಗೆ ₹ 5 ಸಾವಿರ ಪರಿಹಾರ ಧನ ನೀಡಲಾಗುವುದು. ಜಿಲ್ಲೆಯಲ್ಲಿ ಮರಣ ಹೊಂದಿದ 19 ಜಾನುವಾರುಗಳ ಮಾಲೀಕರಿಗೆ ₹ 3.35 ಲಕ್ಷ ಪರಿಹಾರ ಧನ ಮಂಜೂರಾಗಿದೆ. ಶೀಘ್ರವೇ, ಅವರ ಬ್ಯಾಂಕಿನ ಉಳಿತಾಯ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಚರ್ಮಗಂಟು ರೋಗದ ಹರಡುವಿಕೆ, ನಿಯಂತ್ರಣ ಕ್ರಮ ಮತ್ತು ರೋಗಪೀಡಿತ ರಾಸುಗಳ ಚಿಕಿತ್ಸಾ ವಿಧಾನಗಳಲ್ಲಿ ಹೊಸ ಆವಿಷ್ಕಾರ ಮತ್ತು ಪರ್ಯಾಯ ಮಾರ್ಗೋಪಾಯ ಕುರಿತು ಮನವರಿಕೆ ಮಾಡಿಕೊಡಲು ಎಲ್ಲಾ ಪಶುವೈದ್ಯಕೀಯ ಸಿಬ್ಬಂದಿಗೆ ಇತ್ತೀಚೆಗೆ ಪಶು ವೈದ್ಯಕೀಯ ತಜ್ಞರಿಂದ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರೋಗಪೀಡಿತ ಜಾನುವಾರುಗಳಿಗೆ ಪಶುವೈದ್ಯರು ಮತ್ತು ಹಾಲು ಒಕ್ಕೂಟದ ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯ ಔಷಧಿಗಳನ್ನು ಸರಬರಾಜು ಮಾಡಲಾಗಿದೆ. ಅಲ್ಲದೇ, ಪಾರಂಪರಿಕ (ಮನೆಮದ್ದು) ಔಷಧಿ ಬಳಸಿ ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆಯೂ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಚರ್ಮಗಂಟು ರೋಗಬಾಧಿತ ಹೈನುರಾಸುಗಳ ಹಾಲನ್ನು ಸೇವಿಸುವುದರಿಂದ ಮನುಷ್ಯರಿಗೆ ಈ ರೋಗ ಹರಡುತ್ತದೆಯೆಂಬ ವದಂತಿ ಸತ್ಯಕ್ಕೆ ದೂರವಾದುದು. ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿಸಿದ್ದಾರೆ.

ಪಶುವೈದ್ಯರ ಸಲಹೆ ಮೇರೆಗೆ ಸೂಕ್ತ ಸೋಂಕು ನಿವಾರಕಗಳಾದ ಸೋಡಿಯಂ ಹೈಫೋಕ್ಲೋರೇಟ್ (ಶೇ. 2ರಿಂದ 3ರಷ್ಟು), 1:3 ಅನುಪಾತದಲ್ಲಿ ಅಯೋಡಿನ್, ಶೇ 20ರಷ್ಟು ಈಥರ್, ಶೇ 1ರಷ್ಟು ಕ್ಲೋರೋಫಾರ್ಮ, ಫಾರ್ಮಲಿನ್‌ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ದನದ ಕೊಟ್ಟಿಗೆಗಳಲ್ಲಿ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ರಾಸುಗಳು ಚೇತರಿಸಿಕೊಳ್ಳಲು ಕನಿಷ್ಠ 2 ರಿಂದ 3 ವಾರದವರೆಗೆ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಈ ರೋಗದಿಂದ ರಾಸುಗಳು ಸಾವನ್ನಪ್ಪಿದರೆ ಅವುಗಳ ಕಳೇಬರಕ್ಕೆ ಸೋಂಕು ನಿವಾರಕ ಸಿಂಪಡಿಸಿ ಆಳವಾದ ಗುಂಡಿ ತೆಗೆದು ಹೂಳಬೇಕು. ರೈತರು ಜಾನುವಾರುಗಳಲ್ಲಿ ರೋಗದ ಲಕ್ಷಣ ಕಂಡುಬಂದರೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT