ಗುರುವಾರ , ನವೆಂಬರ್ 14, 2019
19 °C
ಮಗನ ಸಾವಿನಿಂದ ಮನನೊಂದು ತಂದೆ ಆತ್ಮಹತ್ಯೆ

ದೊಡ್ಡಬಳ್ಳಾಪುರ: ತನ್ನದೇ ಚಿತೆಗೆ ಬೆಂಕಿ ಹಚ್ಚಿ ಸಾವಿಗೆ ಶರಣಾದ 85ರ ವೃದ್ಧ

Published:
Updated:

ದೊಡ್ಡಬಳ್ಳಾಪುರ: ಮಗನ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಸುಮಾರು 85 ವರ್ಷದ ಅಜ್ಜಪ್ಪ ತಾವೇ ಸಿದ್ಧಪಡಿಸಿದ ಚಿತೆಯ ಬೆಂಕಿಯಲ್ಲಿ ಜೀವಂತ ದಹನವಾಗಿರುವುದು ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪೂರು ಗ್ರಾಮ ಹೊರವಲಯದ ಗೊರವೆಹಳ್ಳದ ಕಾಡು ಪ್ರದೇಶದಲ್ಲಿ ಈಚೆಗೆ ನಡೆದಿದೆ.

ಅಜ್ಜಪ್ಪ ಗೊರವೆಹಳ್ಳದ ಕಾಡಿನಲ್ಲಿ ಸೌದೆ ಸಂಗ್ರಹಿಸಿ ಅದರಿಂದ ಮರದ ಮಧ್ಯದಲ್ಲಿ ಚಿತೆಯನ್ನು ಸಿದ್ಧಗೊಳಿಸಿ ಬಳಿಕ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಿಪ್ಪೂರು ಗ್ರಾಮದ ನಿವಾಸಿ ಅಜ್ಜಪ್ಪನ ಏಕೈಕ ಪುತ್ರ ಎ.ಸಿದ್ದಪ್ಪ (58) ಸುಮಾರು 6 ತಿಂಗಳ ಹಿಂದೆ ಗಂಭೀರ ರೋಗದಿಂದ ಮೃತಪಟ್ಟಿದ್ದರು. ಅಜ್ಜಪ್ಪನ ಪತ್ನಿ ಪೊನ್ನಕ್ಕ 40 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಅಂದಿನಿಂದಲೂ ಮಗನನ್ನು ಸಾಕಿ ಸಲಹುವ ಹೊಣೆ ಹೊತ್ತಿದ್ದ ಅಜ್ಜಪ್ಪ, ಮಗನ ಮೇಲೆ ಅತೀವ ಪ್ರೀತಿ ಹೊಂದಿದ್ದರು. ಮಗ ರೋಗದಿಂದ ಬಳಲುತ್ತಿದ್ದಾಗಲೇ ಮನೆ ಬಿಟ್ಟು ಗ್ರಾಮದ ದೇವಸ್ಥಾನ ಸೇರಿದಂತೆ ಎಲ್ಲೆಂದರಲ್ಲಿ ರಾತ್ರಿ ವಾಸ ಮಾಡುತ್ತಿದ್ದರು. ಅವರು, ಸೊಸೆ ಮತ್ತು ಮೊಮ್ಮಗನ ಜತೆ ಮಗನು ಸಾಯುವ ಮುನ್ನವೇ ಮಾತು ಬಿಟ್ಟಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರತಿದಿನ ಗೊರವೆಹಳ್ಳದ ಕಾಡಿಗೆ ಹೋಗುತ್ತಿದ್ದ ಅಜ್ಜಪ್ಪ, ಸಂಜೆ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಅಕ್ಟೋಬರ್ 9ರಂದು ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೋದವರು ಸಂಜೆಯಾದರೂ ಬಂದಿರಲಿಲ್ಲ. ಸತತ ನಾಲ್ಕು ದಿನ ಅವರಿಗಾಗಿ ಕುಟುಂಬದವರು ಹುಡುಕಾಟ ನಡೆಸಿದ್ದರು. ಕಾಡಿನಲ್ಲಿ ಕುರಿ ಮೇಯಿಸುವವರ ಕಣ್ಣಿಗೆ ಗೊರವೆಹಳ್ಳದ ಸಮೀಪದ ಕಾಡಿನಲ್ಲಿ ಚಿತೆಯೊಂದರಲ್ಲಿ ಅರೆಬೆಂದ ಶವ ಭಾನುವಾರ ಇರುವುದು ಕಾಣಿಸಿತು. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಅಜ್ಜಪ್ಪ, ತಾವೇ ಕಟ್ಟಿಗೆ ಸಂಗ್ರಹಿಸಿ, ಚಿತೆ ಪೇರಿಸಿ ಬೆಂಕಿ ಹಚ್ಚಿ ಹಾರಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಣೆಯಾದ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರತಿಕ್ರಿಯಿಸಿ (+)