ಗುರುವಾರ , ಫೆಬ್ರವರಿ 25, 2021
30 °C
ರೈತರ ಮೇಲೆ ಬರೆ ಹಾಕಿದ ಕೊರೊನಾ ಪರಿಣಾಮ

ದೊಡ್ಡಬಳ್ಳಾಪುರ: ಹೂವಿನ ಬೆಳೆ ಉಳುಮೆ ಮಾಡಿದ ರೈತ  

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ಜಾರಿಗೆ ಬಂದಾಗಿನಿಂದಲೂ ಹೂವು ಬೆಳೆಗಾರರ ಬಗ್ಗೆ ಅನುಕಂಪದ ಮಾತುಗಳನ್ನು ಹೇಳಲಾಗುತ್ತಿದೆಯೇ ವಿನಹ ಬೆಳೆಗಾರರಿಗೆ ಒಂದೇ ಒಂದು ಉತ್ತೇಜನ ಘೋಷಣೆ ಮಾಡಿಲ್ಲ ಎಂದು ಹೂವು ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಪಾಲಿಹೌಸ್‌ನಲ್ಲಿ ಬೆಳೆಯಲಾಗಿದ್ದ ಹೂವು ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿದ ರೈತ ವೆಂಕಟೇಶ್‌ ಈ ಬಗ್ಗೆ ಮಾಹಿತಿ ನೀಡಿದರು. 

‘ಪಾಲಿಹೌಸ್‌ ನಿರ್ಮಾಣದ ಖರ್ಚು ಹೊರತುಪಡಿಸಿ ಒಂದು ಎಕರೆ ಪ್ರದೇಶದಲ್ಲಿ ಹೂವು ಬೆಳೆ ಬೆಳೆಯಲು ಕನಿಷ್ಠ ₹5ಲಕ್ಷ ಖರ್ಚು ಬರಲಿದೆ. ಜನವರಿಯಿಂದ ಜುಲೈವರೆಗೆ ಹೆಚ್ಚಿನ ಹೂವು ಬರುವಂತೆ ಎಲ್ಲಾ ರೈತರು ಬೆಳೆಯುತ್ತಾರೆ. ಆದರೆ, ಈ ‌ಬಾರಿ ವಿದೇಶಗಳಿಗೂ ಹೂವಿನ ರಫ್ತು ಜನವರಿ ತಿಂಗಳಿಂದಲೇ ಬಂದ್‌ ಆಗಿದೆ. ದೇಶಿ ಹಾಗೂ ಸ್ಥಳೀಯ ಮಾರುಕಟ್ಟೆಯೂ ಇಲ್ಲದಾಗಿದೆ. ತೋಟದಲ್ಲೇ ಹೂವು ಗಿಡಗಳನ್ನು ಉಳಿಸಿಕೊಂಡರೆ ಈಗಷ್ಟೇ ಬೆಳೆಯುತ್ತಿರುವ ಹೂವಿನ ಗಿಡಗಳಿಗೂ ರೋಗ ಮುತ್ತಿಕೊಳ್ಳಲಿದೆ. ಇದಲ್ಲದೆ ಇತರೆ ಬೆಳೆಯನ್ನು ಬೆಳೆಯಲು ಸಾಧ್ಯವಾಗದಂತೆ ರೋಗ ಹರಡಲಿದೆ. ಹೀಗಾಗಿ ಉಳಿಮೆ ಮಾಡುವುದು ಅನಿವಾರ್ಯವಾಗಿದೆ’ ಎಂದರು.

ತೋಟಗಾರಿಕೆ ಇಲಾಖೆ ಸಚಿವರಿಂದ ಮೊದಲುಗೊಂಡು ಎಲ್ಲರಿಗೂ ಮನವಿ ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ತುರ್ತುಕ್ರಮಗಳೊಂದಿಗೆ ದೀರ್ಘಾವಧಿ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ ಎನ್ನುತ್ತಾರೆ ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ನಿರ್ದೇಶಕ ಟಿ.ಎಂ.ಅರವಿಂದ್‌. ತುರ್ತಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಸಿರು ಮನೆ ನಿರ್ಮಾಣಕ್ಕೆ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂಬ ಒತ್ತಾಯ ಮುಂದಿಟ್ಟರು. 

ಕೊರೊನಾ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆ ಸುಧಾರಣೆಯಾಗಲು ಸಾಕಷ್ಟು ಸಮಯವಾಗಲಿದೆ. ಹೀಗಾಗಿ ಆರು ತಿಂಗಳ ಮಟ್ಟಿಗೆ ಸಾಲದ ಕಂತಿನ (ಇಎಂಐ) ಮುಂದೂಡಬೇಕು. ಹಸಿರು ಮನೆಯಲ್ಲಿನ ಹೂವು ಬೆಳೆಗೆ ವಿದ್ಯುತ್ ಬಳಕೆಗೆ ವಿಧಿಸಲಾಗುತ್ತಿರುವ ವಿದ್ಯುತ್ ಶುಲ್ಕವನ್ನು ಆರು ತಿಂಗಳ ಮಟ್ಟಿಗೆ ಮನ್ನಾ ಮಾಡಬೇಕು. ಹೂವು ಮಾರಾಟಕ್ಕೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಮಾರುಕಟ್ಟೆ ಸೌಲಭ್ಯ ಇಲ್ಲ. ಬೆಂಗಳೂರಿನ ಹೆಬ್ಬಾಳದಲ್ಲಿ ಕೇವಲ ಗುಲಾಬಿ ಹೂವು ಮಾರಾಟಕ್ಕೆ ಮಾತ್ರ ಮಾರುಕಟ್ಟೆ ಇದೆ. ಹೀಗಾಗಿ ಶೇ70ರಷ್ಟು ರೈತರು ಬೆಳೆಯುವ ಜರ್ಬೆರ, ಕಾರ್ನಿಷನ್ ಮುಂತಾದ ರಫ್ತು ಗುಣಮಟ್ಟದ ಹೂವುಗಳ ಮಾರಾಟಕ್ಕೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪ ಹೂವು ಮಾರಾಟ ಮಾಡಲು ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿಗೊಳಿಸಬೇಕು. ಸರ್ಕಾರ ಈ ಬಗ್ಗೆ ತುರ್ತಾಗಿ ಹೂವು ಬೆಳೆಗಾರರ ನೆರವಿಗೆ ಬಾರದೇ ಇದ್ದರೆ ಇಡೀ ದೇಶದಲ್ಲೇ ಹೂವುಗಳನ್ನು ರಫ್ತು ಮಾಡುವಲ್ಲಿ ರಾಜ್ಯಕ್ಕೆ ಇರುವ ಹೆಸರು ಅಳಿಸಿಹೋಗಲಿದೆ ಎಂದು ಅವರು ಅತಂಕ ವ್ಯಕ್ತಪಡಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು