ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತಿನ ಸಮಾನ ಹಂಚಿಕೆ ಮರೀಚಿಕೆ

ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಸಚಿವ ಎ. ನಾರಾಯಣಸ್ವಾಮಿ ವಿಷಾದ
Last Updated 28 ನವೆಂಬರ್ 2022, 4:49 IST
ಅಕ್ಷರ ಗಾತ್ರ

ಆನೇಕಲ್: ಕರ್ನಾಟಕ ರಾಜ್ಯ ಮಗ್ಗದವರ ಸಂಘದಿಂದ ಪಟ್ಟಣದಲ್ಲಿ ಕರುನಾಡ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಭಾನುವಾರ ನಡೆಯಿತು.

ನೂರಾರು ಕಲಾವಿದರು ಕಹಳೆ ಊದಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಒನಕೆ ಹಿಡಿದು ಸಾಗಿದ ಮಹಿಳೆಯರು, ಪುಟಾಣಿಗಳು ಜಯಂತಿಗೆ ಸಾಕ್ಷಿಯಾದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ದೇಶದ ಎಲ್ಲೆಡೆ ಶೋಷಿತರ ಪೈಕಿ ಶೇ 95ರಷ್ಟು ಮಂದಿಗೆ ಸ್ವಂತ ಭೂಮಿಯಿಲ್ಲ. ಎಲ್ಲಾ ವರ್ಗಗಳಿಗೂ ದೇಶದ ಸಂಪತ್ತು ಸಮನಾಗಿ ಹಂಚಿಕೆಯಾಗಬೇಕು ಎಂಬ ಸಂವಿಧಾನದ ಆಶಯ ಕನಸಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ಸಂವಿಧಾನದ ಹಕ್ಕುಗಳನ್ನು ಪಡೆಯಲು ಎಲ್ಲಾ ಶೋಷಿತ ವರ್ಗಗಳು ಸಂಘಟಿತರಾಗಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಅಭಿವೃದ್ಧಿಗೆ ದಾರಿದೀಪವಾಗಬೇಕು. ಈ ದಿಸೆಯಲ್ಲಿ ಸಂಘ, ಸಂಸ್ಥೆಗಳು ರಚನಾತ್ಮಕ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ಬೃಹತ್‌ ಸಭೆಗಳಿಗೂ ಪ್ರೇಕ್ಷಕರು ಶೋಷಿತರೇ ಆಗಿರುತ್ತಾರೆ. ಆದರೆ, ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂದರು.

18ನೇ ಶತಮಾನದಲ್ಲಿ ಶೋಷಿತ ವರ್ಗದ ಒನಕೆ ಓಬವ್ವ ಪ್ರಾಣದ ಹಂಗು ತೊರೆದು ನಾಡಿಗಾಗಿ ಪ್ರಾಣಾರ್ಪಣೆ ಮಾಡಿದರು. ಆಕೆಯ ಜಯಂತಿ ಆಚರಣೆ ಮೂಲಕ ಸ್ವಾಭಿಮಾನ, ದೇಶಾಭಿಮಾನ ನಮ್ಮೆಲ್ಲರ ಆದರ್ಶಗಳಾಗಬೇಕು ಎಂದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಮಗ್ಗದ ಕುಟುಂಬದವರು ನಂಬಿಕೆ, ನಿಯತ್ತಿಗೆ ಹೆಸರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಈ ಸಮಾಜದ ಒನಕೆ ಓಬವ್ವ ಮೂರು ಶತಮಾನಗಳ ಹಿಂದೆ ಚಿತ್ರದುರ್ಗದಲ್ಲಿ ತನ್ನ ನಾಡನ್ನು ರಕ್ಷಿಸಲು ಶತ್ರು ಸೈನ್ಯದ ವಿರುದ್ಧ ಏಕಾಂಗಿ ಹೋರಾಟ ನಡೆಸಿದರು. ಆಕೆಯ ವೀರಗಾಥೆಯು ರಾಜಪ್ರಭುತ್ವದ ನಂಬಿಕೆ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಆಕೆಯ ಜೀವನ ಸಾಧನೆ, ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಮುಖ್ಯವಾಹಿನಿಯಿಂದ ದೂರ ಉಳಿದ ಶೋಷಿತ ಸಮಾಜದವರು ರಾಜಕೀಯ ಸ್ಥಾನಮಾನ ಪಡೆಯಬೇಕಾದರೆ ಅಂಬೇಡ್ಕರ್‌ ಅವರ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಹಾಗಾಗಿ, ಶೋಷಿತ ಸಮಾಜಗಳು ಸಂಘಟಿತರಾಗಿ ರಾಜಕೀಯ, ಸಾಮಾಜಿಕ ಸ್ಥಾನಮಾನ ಪಡೆದು ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಕೋಲಾರ ಸಂಸದ ಮುನಿಸ್ವಾಮಿ ಮಾತನಾಡಿ, ಆನೇಕಲ್‌ನಲ್ಲಿ 37 ಸಾವಿರ ಮಗ್ಗದ ಸಮಾಜಕ್ಕೆ ಸೇರಿದ ಮತದಾರರಿರುವುದು ಒಂದು ಶಕ್ತಿಯಾಗಿದೆ. ಈ ಶಕ್ತಿ ಬಳಸಿಕೊಂಡು ರಾಜಕೀಯ ಶಕ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಆನೇಕಲ್‌ನಲ್ಲಿ ಸ್ಥಳ ಗುರುತಿಸಿದರೆ ಒನಕೆ ಓಬವ್ವಳ ಕಂಚಿನ ಪ್ರತಿಮೆಯನ್ನು ವೈಯಕ್ತಿಕವಾಗಿ ನಿರ್ಮಿಸಿ ಕೊಡಲಾಗುವುದು. ಕೋಲಾರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಟಿ. ಚೆನ್ನಯ್ಯರ ಪ್ರತಿಮೆಯನ್ನು ಕೋಲಾರದಲ್ಲಿ ಸ್ಥಾಪಿಸಲು ಎಲ್ಲರ ಸಹಕಾರ ಪಡೆಯಲಾಗುವುದು ಎಂದರು.

ಮುನೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಾಜಿ ಸಚಿವ ಎಂ.ಪಿ. ಕೇಶವಮೂರ್ತಿ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌. ನಾಗೇಶ್‌, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ, ಮುಖಂಡರಾದ ಚಿ.ನಾ. ರಾಮು, ಯೋಗೇಶ್ ಇದ್ದರು. ಮುಖಂಡ ಬಳ್ಳೂರು ಮಧುಕುಮಾರ್‌ ನಿರೂಪಿಸಿದರು.

ಒನಕೆ ಓಬವ್ವ ಮತ್ತು ಅಂಬೇಡ್ಕರ್‌ ಅವರ ಭಾವಚಿತ್ರಗಳ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಓಬವ್ವಳ ವೇಷಧಾರಿಗಳು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT