ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ₹51 ಲಕ್ಷ ಉಳಿತಾಯ ಬಜೆಟ್

ದೇವನಹಳ್ಳಿ ಪುರಸಭೆಯ 2021--22ನೇ ಸಾಲಿನ ಆಯವ್ಯಯ ಮಂಡನೆ
Last Updated 24 ಏಪ್ರಿಲ್ 2021, 5:06 IST
ಅಕ್ಷರ ಗಾತ್ರ

ವಿಜಯಪುರ: ‘ದೇವನಹಳ್ಳಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಲಾಗಿದೆ’ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ನಾಗೇಶ್ ತಿಳಿಸಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ 2021-22 ನೇ ಸಾಲಿನ ಬಜೆಟ್ ಮಂಡನೆ ಮಾಡಿ ಅವರು ಮಾತನಾಡಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ₹26.79 ಕೋಟಿ ಬಜೆಟ್‌ ಮಂಡನೆ ಮಾಡಲಾಗಿದೆ. ಸಾಮಾನ್ಯ ನಿಧಿ, ನೀರಿನ ನಿಧಿ ಉದ್ಯಮ ನಿಧಿಯ ಆದಾಯಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನಗಳು ಸರ್ಕಾರದ ಅನುದಾನಗಳ ಆದಾಯ ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ ಕಚೇರಿಯ ವೇತನ ಮತ್ತು ನಿರ್ವಹಣೆ ವೆಚ್ಚ, ಆಡಳಿತ ಮಂಡಳಿಯ ವೆಚ್ಚ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಗಳ ವೆಚ್ಚ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆ, ನೀರು ಸರಬರಾಜು ಕಾಮಗಾರಿ ಮತ್ತು ನಿರ್ವಹಣೆ ವೆಚ್ಚ, ಆರೋಗ್ಯ ವಿಭಾಗ ಮತ್ತು ಘನ ತ್ಯಾಜ್ಯ ನಿರ್ವಹಣಾ ವೆಚ್ಚ ಸಿವಿಲ್ ಕಾಮಗಾರಿಗಳ ನಿರ್ವಹಣೆ ವೆಚ್ಚ, ನಗರ ಅರಣ್ಯೀಕರಣ ವೆಚ್ಚ, ಸರ್ಕಾರಿ ತೆರಿಗೆ ಮತ್ತು ಕರಗಳ ಪಾವತಿಗಳಿಗೆ ಅನುದಾನ ಬಳಕೆ ಮಾಡಿಕೊಂಡು ₹51 ಲಕ್ಷ ಉಳಿತಾಯ ಮಾಡಲು ನಿರೀಕ್ಷೆ ಮಾಡಲಾಗಿದೆ’ ಎಂದರು.

‘ಕುಡಿಯುವ ನೀರು, ಪಟ್ಟಣದ ಸ್ವಚ್ಛತೆ ಹಾಗೂ ಬಡವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಬಡವರ ವಸತಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪಗಳು, ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ಪೌರಕಾರ್ಮಿಕರಿಗೆ ವಿಶೇಷ ಸೌಲಭ್ಯ: ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ವ್ಯವಸ್ಥೆ ಮುಂದುವರಿಸುವುದು, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದು, ₹20 ಲಕ್ಷ ಅಪಘಾತ ವಿಮೆ, ಕೋವಿಡ್ ಮುನ್ನೆಚ್ಚರಿಕೆ ರಕ್ಷಾಕವಚ, ಪೌರಕಾರ್ಮಿಕರ ದಿನಾಚರಣೆಯಂದು ಗೃಹೋಪಯೋಗಿ ವಸ್ತುಗಳ ವಿತರಣೆ, ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಆದ್ಯತೆ, ಆಸ್ತಿ ಮತ್ತು ನೀರಿನ ತೆರಿಗೆಯನ್ನು ಶೇ.24.10 ರ ನಿಧಿಯಲ್ಲಿ ಭರಿಸುವುದಕ್ಕೆ ಆದ್ಯತೆ ನೀಡಲಾಗಿದೆ.

ನಾಗರಿಕರಿಗೆ ವಿಶೇಷ ಸೌಲಭ್ಯ: ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಬಡ ಕುಟುಂಬದವರಿಗೆ ₹10 ಸಾವಿರ ಸಹಾಯಧನ, ಕುಡಿಯುವ ನೀರಿನ ಘಟಕ ಸ್ಥಾಪನೆ, ಸಿಹಿನೀರಿನ ಕೆರೆಯ ಸುತ್ತಲು ವಾಯುವಿಹಾರಕ್ಕಾಗಿ ಪಾದಚಾರಿ ಮಾರ್ಗ ಮತ್ತು ಉದ್ಯಾನ ನಿರ್ಮಿಸಿ ವ್ಯಾಯಾಮ ಸಲಕರಣೆಗಳನ್ನು ಅಳವಡಿಕೆ. ಮುಕ್ತಿ ವಾಹನ ಮತ್ತು ಶವಸಂರಕ್ಷಣಾ ಪೆಟ್ಟಿಗೆ ಸೌಲಭ್ಯ, ಪುರಸಭಾ ಕಚೇರಿಯ ಮುಂಭಾಗದಲ್ಲಿ 4 ಅಂತಸ್ತಿನ ವಾಣಿಜ್ಯ ಸಂಕೀರ್ಣ, ಸಮಾರಂಭ ಸಭಾಂಗಣ ನಿರ್ಮಾಣ, ಜನಸಂದಣಿ ಇರುವ ಕಡೆ ಹಾಗೂ ಅಪಘಾತವಲಯಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಪ್ರಕಟಿಸಲಾಗಿದೆ.

ಬಯ್ಯಪ್ಪಾ ಅನುದಾನದಿಂದ ಕೆಂಪೇಗೌಡ ವೃತ್ತದಿಂದ ಪಟ್ಟಣದ ಮಧ್ಯಭಾಗದಿಂದ ರಾಣಿ ವೃತ್ತದವರೆಗೂ ರಸ್ತೆ ಮತ್ತು ಪಾದಚಾರಿ ಮಾರ್ಗ, ಪಟ್ಟಣದ ಪ್ರಮುಖ ವೃತ್ತಗಳಾದ ಶಿವಕುಮಾರಸ್ವಾಮೀಜಿ ವೃತ್ತ, ಹಳೇ ಬಸ್ ನಿಲ್ದಾಣ ವೃತ್ತ, ಹೊಸ ಬಸ್ ನಿಲ್ದಾಣದ ಪ್ರೊ.ನಂಜುಂಡಸ್ವಾಮಿ ವೃತ್ತಗಳನ್ನು ಅಭಿವೃದ್ಧಿ. ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ. ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ₹48.10 ಲಕ್ಷ. ಬಡವರ್ಗದ ಕಲ್ಯಾಣ
ಕಾರ್ಯಕ್ರಮಗಳಿಗೆ ₹28.17 ಲಕ್ಷ ಮೀಸಲಿರಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಎ.ಎಚ್ ನಾಗರಾಜ್, ಉಪಾಧ್ಯಕ್ಷೆ ಪುಷ್ಪಾ ಲಕ್ಷ್ಮೀನಾರಾಯಣ, ಸದಸ್ಯರಾದ ಜಿ.ಎ.ರವೀಂದ್ರ, ರತ್ನಮ್ಮ ರವಿಕುಮಾರ್, ಎನ್.ರಘು, ಎಸ್.ಸಿ ಚಂದ್ರಪ್ಪ, ಮಂಜುನಾಥ್, ಬಾಲರಾಜ್, ಮುನಿಕೃಷ್ಣ, ಗೋಪಿ, ಲಕ್ಷ್ಮೀ ಅಂಬರೀಶ್, ರುದ್ರೇಶ್, ಗೀತಾಶ್ರೀಧರ್, ಲೀಲಾವತಿ ಶಿವಕುಮಾರ್, ಕೋಮಲ, ಸುಮಿತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT