ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಗ್ರಾ.ಪಂಗಳಲ್ಲಿ ಆಧಾರ್ ನೋಂದಣಿ ಸ್ಥಗಿತ; ಪೋಷಕರಿಗೆ ತಟ್ಟಿದ ನೀತಿ ಸಂಹಿತೆ ಬಿಸಿ

Last Updated 21 ಮೇ 2019, 14:09 IST
ಅಕ್ಷರ ಗಾತ್ರ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆ ಪರಿಣಾಮ ನಾಡಕಚೇರಿಯೂ ಸೇರಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಎರಡು ತಿಂಗಳಿಂದ ಸ್ಥಗಿತಗೊಂಡಿದೆ ಎಂದು ಹಾಗಾಗಿ ಪೋಷಕರು ಇನ್ನಿಲ್ಲದ ಪರದಾಟ ನಡೆಸುವಂತಾಗಿದೆ ಎಂದು ಅಂಬೇಡ್ಕರ್ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್ ಆರೋಪಿಸಿದ್ದಾರೆ.

ಇದರಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ದಾಖಲು ಮಾಡಲಿಕ್ಕೆ ಆಧಾರ್ ಮಾಡಿಸಲು ಪಾಲಕರು ಇಲ್ಲದ ತೊಂದರೆ ಅನುಭವಿಸಬೇಕಾಗಿದೆ.

ಆಧಾರ್‌ಗೆ ಹೆಚ್ಚಿದ ಮಹತ್ವ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಯೋಜನೆಗೂ ಈಗ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಆಧಾರ್ ಕಾರ್ಡ್‌ಗೆ ಹೆಚ್ಚಿನ ಮಹತ್ವ ಬಂದಿದೆ.

ಆದರೆ, ಕಾಲಮಿತಿಯೊಳಗೆ ಆಧಾರ್ ಸಿಗದೇ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ದೂರವಾಗಿ ಯೋಜನೆಗಳ ಲಾಭ ಜನರ ಪಾಲಿಗೆ ಸಿಗದಂತಾಗಿದೆ.

ಶಾಲಾ ದಾಖಲಾತಿಗೆ ಕಡ್ಡಾಯ: ಶಾಲಾ, ಕಾಲೇಜುಗಳು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿವೆ. ಕೆಲವು ಶಾಲೆಗಳು ಈಗಾಗಲೇ ಆರಂಭವಾಗಿವೆ. ದಾಖಲಾತಿ ಪ್ರಕ್ರಿಯೆಗಳು ಎಲ್ಲ ಕಡೆ ಶುರುವಾಗಿವೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಲು ಹಾಗೂ ಶಾಲಾ, ಕಾಲೇಜುಗಳಲ್ಲಿ ದಾಖಲಾತಿಗಾಗಿ ಆಧಾರ್ ಸಂಖ್ಯೆ ಕೊಡುವುದು ಕಡ್ಡಾಯವಾಗಿರುವುದರಿಂದ ಸದ್ಯ ಆಧಾರ್‌ಗೆ ಪರದಾಡುತ್ತಿರುವ ಸ್ಥಿತಿ ಬಂದಿದೆ ಎಂದರು.

ಮುಖಂಡ ಮಂಜುನಾಥ್ ಮಾತನಾಡಿ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮಾಡಲಾಗುತ್ತಿದ್ದ ಆಧಾರ್ ನೋಂದಣಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಜನ ಸಾಮಾನ್ಯರು ಆಧಾರ್ ನೋಂದಣಿಗೆ ಅಲೆದಾಡಬೇಕಿದೆ.

ಕೆಲವೊಂದು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇದರ ನೋಂದಣಿಗೆ ಅವಕಾಶ ಕೊಡಲಾಗಿದ್ದರೂ ಸಾಕಷ್ಟು ವಿಳಂಬ ಆಗುತ್ತಿದೆ. ದಿನಕ್ಕೆ ಕೇವಲ 20 ರಿಂದ 30 ಮಂದಿಗೆ ಆಧಾರ್ ನೋಂದಣಿಗೆ ಬ್ಯಾಂಕ್‌ಗಳು ಟೋಕನ್ ವಿತರಿಸುತ್ತಿರುವುದರಿಂದ ಬೆಳಿಗ್ಗೆ 4 ಗಂಟೆಗೆ ಬಂದು ಸಾಲುಗಟ್ಟಿ ನಿಂತರೂ ಬ್ಯಾಂಕ್‌ಗಳಲ್ಲಿ ಆಧಾರ್ ಪಡೆಯಲು ಟೋಕನ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖಂಡ ಹರೀಶ್ ಮಾತನಾಡಿ, ದಿನನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಬರುವ ರೈತಾಪಿ ಜನ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಆಧಾರ್ ಪಡೆಯಲು ಸಾಧ್ಯವಾಗದೇ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ. ಬಹಳಷ್ಟು ಮಂದಿ ಆಧಾರ್ ಕಾರ್ಡ್‌ನ್ನು ಹೊಸದಾಗಿ ಪಡೆಯುವುದಕ್ಕಿಂತ ತಿದ್ದುಪಡಿಗೆ ಹೆಚ್ಚು ಅರ್ಜಿಗಳು ಹಾಕುತ್ತಿರುವುದರಿಂದ ಹೆಚ್ಚು ಸಮಸ್ಯೆಗಳಾಗುತ್ತಿವೆ ಎಂದರು.

ಮೂರು ತಿಂಗಳಿನಿಂದ ಸರ್ವರ್ ಸಮಸ್ಯೆಯಿದೆ. ಆದ್ದರಿಂದ ಕಾರ್ಡ್‌ಗಳನ್ನು ತೆಗೆಯಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ನಾಡಕಚೇರಿಯ ಸಿಬ್ಬಂದಿ ರವಿಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT