ಬುಧವಾರ, ಅಕ್ಟೋಬರ್ 21, 2020
24 °C
ಉತ್ತಮ ಸಾಧನೆ ಶಿಕ್ಷಕರಿಗೆ ‘ರಾಷ್ಟ್ರ ನಿರ್ಮಾತೃ’ ಪ್ರಶಸ್ತಿ ಪ್ರದಾನ

‘ಸಂಪೂರ್ಣ ಸಾಕ್ಷರತೆ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ರೋಟರಿ ಸಂಸ್ಥೆಯು ಪೋಲಿಯೊ  ನಿರ್ಮೂಲನೆ ಮಾಡಲು ಜಾಗತಿಕ ಕಾರ್ಯಕ್ರಮ ರೂಪಿಸಿ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ 2025ರ ವೇಳೆಗೆ ಸಂಪೂರ್ಣ ಸಾಕ್ಷರತೆ ಸಾಧಿಸುವ ಗುರಿ ಹೊಂದಿದೆ ಎಂದು ರೋಟರಿ ಜಿಲ್ಲಾ ಸಾಕ್ಷರತಾ ಸಮಿತಿಯ ಅಧ್ಯಕ್ಷ ಗುರುನಾಗೇಶ್‌ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ರಾಷ್ಟ್ರನಿರ್ಮಾತೃ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣದಿಂದ ಒಂದು ದೇಶದ ಭವಿಷ್ಯ ರೂಪಿಸಲು ಸಾಧ್ಯ. ಹಾಗಾಗಿ ಎಲ್ಲರೂ ಶಿಕ್ಷಣ ಪಡೆದರೆ ಜನರಲ್ಲಿ ಜಾಗೃತಿ ಮೂಡಿ ಅಭಿವೃದ್ಧಿಗೆ ಹಾದಿಯಾಗುತ್ತದೆ. ಹಾಗಾಗಿ ಶಿಕ್ಷಣ ಮತ್ತು ಆರೋಗ್ಯ ಆದ್ಯತೆ ಕ್ಷೇತ್ರಗಳಾಗಿವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ ಮಾತನಾಡಿ, ರೋಟರಿ ಸಂಸ್ಥೆ ಸೇವಾ ಮನೋಭಾವನೆ ಸಂಸ್ಥೆಯಾಗಿದೆ. ಆನೇಕಲ್‌ ತಾಲ್ಲೂಕಿನ 25 ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುವ ಮೂಲಕ ಶೈಕ್ಷಣಿಕ ಕೊಡುಗೆ ನೀಡಿವೆ. ಸಂತಸ ಶಾಲೆ ಎಂಬ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಿಂದ 17 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ಈ ಸಾಲಿನಲ್ಲಿ ರೋಟರಿ ಮತ್ತು ಸಾಬೀಕ್‌ ಸಂಸ್ಥೆ ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ಎಂಟು ಶಾಲೆಗಳನ್ನು ಪುನರ್‌ ನವೀಕರಣ ಮಾಡುತ್ತಿದೆ ಎಂದರು.

ರೋಟರಿ ಜಿಲ್ಲಾ ಕಾರ್ಯದರ್ಶಿ ಬಿ.ಆರ್‌.ಶ್ರೀಧರ್‌ ಮಾತನಾಡಿ, ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಕೈಗೊಂಡಿದೆ. ಶಿಕ್ಷಕರಿಗಾಗಿ ಉಚಿತ ಆರೋಗ್ಯ ತಪಾಸಣೆ, ತರಬೇತಿ, ಶಾಲೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಆನೇಕಲ್‌ ಉರ್ದು ಶಾಲೆ ಕೆ.ನಾಗರಾಜು, ಅಡಿಗಾರಕಲ್ಲಹಳ್ಳಿ ಶಾಲೆಯ ಹಸೀನ್‌ ತಾಜ್, ಕುವೆಂಪುನಗರ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯ ಆರ್‌.ಸವಿತಾ, ಚೆಂಬನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರೇಮಾ ಆರಾಧನ, ಅತ್ತಿಬೆಲೆ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ನಾಗರಾಜು, ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್‌.ಜಾನ್ಸಿರಾಣಿ ಅವರಿಗೆ ರೋಟರಿ ನೇಷನ್‌ ಬಿಲ್ಡರ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.