ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಸಮಗ್ರ ಅಭಿವೃದ್ಧಿ ಕಾರ್ಯ

ಉದ್ಯೋಗ ಖಾತ್ರಿ ಯೋಜನೆ: ದೇವನಹಳ್ಳಿ ತಾಲ್ಲೂಕಿನಲ್ಲಿ ಶೇ76 ರಷ್ಟು ಪ್ರಗತಿ
Last Updated 19 ಜನವರಿ 2019, 13:52 IST
ಅಕ್ಷರ ಗಾತ್ರ

ದೇವನಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಸಾಗುತ್ತಿದೆ ಎಂಬುದಕ್ಕೆ ತಾಲ್ಲೂಕು ಪಂಚಾಯಿತಿ ಇಲಾಖೆ ನೀಡಿರುವ ಮಾಹಿತಿಯೇ ಸಾಕ್ಷಿ. ವಾಡಿಕೆ ಮಳೆ ಕೊರತೆಯಿಂದ ಸತತ ಬರಗಾಲ ಬೆನ್ನಿಗೆ ಕಟ್ಟಿಕೊಂಡು ಸಾಗಿರುವ ತಾಲ್ಲೂಕಿನಲ್ಲಿ ಪ್ರಸ್ತುತ ಉದ್ಯೋಗಖಾತ್ರಿ (ನರೇಗಾ)ಯೋಜನೆ 2018ನೇ ಸಾಲಿನಿಂದ ಮತ್ತಷ್ಟು ವೇಗ ಪಡೆದಿದೆ ಎಂದು ಅಂಕಿ – ಅಂಶಗಳು ಸಾದರಪಡಿಸಿದೆ.

‌24 ಗ್ರಾಮ ಪಂಚಾಯಿತಿ ಒಳಗೊಂಡಿರುವ ತಾಲ್ಲೂಕಿನಲ್ಲಿ 2018ನೇ ಸಾಲಿನಲ್ಲಿ 2,76,829 ಮಾನವ ದಿನಗಳ ಗುರಿ ಪೈಕಿ 2.83 ಲಕ್ಷ ಮಾನವದಿನಗಳನ್ನು ಸೃಷ್ಟಿಸಿ ಶೇ102 ರಷ್ಟು ಸಾಧನೆಯಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.

ಕೃಷಿ, ತೋಟಗಾರಿಕೆ, ರೇಷ್ಮೆ, ಪಶು, ಮೀನುಗಾರಿಕೆ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತೊಡಗಿಸಿಕೊಳ್ಳಲು ಮುಕ್ತ ಅವಕಾಶವಿರುವುದರಿಂದ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಇಲಾಖೆಗಳ ಮೇಲೆ ಒತ್ತಡ ಹಾಕಿ ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ತಾಕೀತು ಮಾಡಿರುವುದರಿಂದ ಮಂದಗತಿಯಲ್ಲಿದ್ದ ಯೋಜನೆ ಚುರುಕುಗೊಂಡಿದೆ ಎನ್ನುತ್ತಾರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು.

ಅಂರ್ತಜಲ ಅಭಿವೃದ್ಧಿಗೆ 136 ಚೆಕ್ ಡ್ಯಾಂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು 77 ಪ್ರಗತಿಯಲ್ಲಿವೆ. ಗೋಕಟ್ಟೆ 3ಪೈಕಿ 2 ಪ್ರಗತಿಯಲ್ಲಿವೆ. ಪಶು ಕೊಟ್ಟಿಗೆ 2,181 ಗುರಿ ಪೈಕಿ 1,513 ಪೂರ್ಣಗೊಂಡಿದ್ದು ಉಳಿಕೆ ಪ್ರಗತಿಯಲ್ಲಿದೆ. ರೈತರ ಒಕ್ಕಣೆ ಕಣ 8ರ ಪೈಕಿ 4 ಪ್ರಗತಿಯಲ್ಲಿದೆ. ಆಟದ ಮೈದಾನ 14 ಗುರಿ ಪೈಕಿ 9 ಪೂರ್ಣಗೊಂಡಿದೆ. ‌‌ಸ್ಮಶಾನ ಅಭಿವೃದ್ಧಿ 21 ಗುರಿ ಪೈಕಿ 12 ಪೂರ್ಣಗೊಂಡಿದೆ.

ಸಾರ್ವಜನಿಕರು ಉಪಯೋಗಿಸುವ 5 ಕಲ್ಯಾಣಿ ಪೈಕಿ 3 ಪ್ರಗತಿಯಲ್ಲಿದೆ. ನೀರು ಕಾಲುವೆ 109 ಗುರಿ ಪೈಕಿ 65 ಕಾಲುವೆಗಳ ಕಾಮಗಾರಿ ಪೂರ್ಣಗೊಂಡಿದೆ. ಕೊಳವೆಬಾವಿ ನೀರು ಮರುಪೂರಣ ಘಟಕ 56 ಗುರಿ ಪೈಕಿ 36 ಪ್ರಗತಿಯಾಗಿದೆ. ಪಶುಗಳಿಗೆ ನೀರು ಸಂಗ್ರಹದ ತೆರೆದ ಸಿಮೆಂಟ್ ತೊಟ್ಟಿ 18ಗುರಿ ಪೈಕಿ 12 ಪೂರ್ಣಗೊಂಡಿವೆ. ‘ನಮ್ಮ ಹೊಲ ನಮ್ಮ ದಾರಿ’ ಘಟಕ ಯೋಜನೆಯಡಿ 119 ಗುರಿ ಪೈಕಿ 74 ಈಗಾಗಲೇ ಪೂರ್ಣಗೊಂಡಿವೆ. ಗ್ರಾಮೀಣ ಉದ್ಯಾನ 9 ಪ್ರಗತಿಯಲ್ಲಿದೆ.

ಇಲಾಖೆ ನೀಡಿರುವ ಅಂಕಿ ಅಂಶ ಒಟ್ಟು 3,334 ಕಾಮಗಾರಿ ಗುರಿ ಪೈಕಿ 2,589 ಪೂರ್ಣ ಮತ್ತು ಪ್ರಗತಿ ಹಂತದಲ್ಲಿದೆ. ಉದ್ಯೋಗ ಖಾತ್ರಿಗೆ ನಿಗದಿಪಡಿಸಲಾದ ಒಟ್ಟು ಮೊತ್ತ ₹12 ಕೋಟಿ 17 ಲಕ್ಷ 77ಸಾವಿರ ಪೈಕಿ ₹9.27 ಕೋಟಿ ವೆಚ್ಚ ಮಾಡಲಾಗಿದ್ದು ಪ್ರಸ್ತುತ ಶೇಕಡ 76ರಷ್ಟು ಸಾಧನೆಯಾಗಿದೆ. 2019ರ ಫೆಬ್ರುವರಿ ಅಂತ್ಯಕ್ಕೆ ಶೇ100ರಷ್ಟು ಸಾಧನೆ ಗುರಿ ಇಟ್ಟುಕೊಳ್ಳಲಾಗಿದೆ ಎಂಬುದು ಅಧಿಕಾರಿಗಳ ಅತ್ಮವಿಶ್ವಾಸದ ನುಡಿ.

ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೆರೆಗಳಿವೆ. ಸರ್ಕಾರ ಪ್ರತಿಯೊಂದು ಕೆರೆಯಲ್ಲಿನ ಹೂಳು ತೆಗೆದು ದುರಸ್ತಿ ಗೊಳಿಸಿದರೆ ಜನ – ಜಾನುವಾರು ಪಕ್ಷಿ ಸಂಕುಲಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT