‘ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕರಿಸಿ’

7
ಕರ್ನಾಟಕ ಮಾದಿಗ ದಂಡೋರ ಪದಾಧಿಕಾರಿಗಳ ಸಭೆಯಲ್ಲಿ ಆಗ್ರಹ

‘ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕರಿಸಿ’

Published:
Updated:
Deccan Herald

ವಿಜಯಪುರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಮಾದಿಗ ದಂಡೋರ ಸಂಘಟನೆ ಒತ್ತಾಯಿಸುತ್ತಿದೆ ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಹೇಳಿದರು.

ಇಲ್ಲಿನ ಪ್ರವಾಸಿಮಂದಿರಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಮಾದಿಗ ದಂಡೋರ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವರದಿಯನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯಾದ್ಯಂತ ಹೋರಾಟಗಳು ಆರಂಭವಾಗಿವೆ. ಸರ್ಕಾರ, ಮೀನಾಮೇಷ ಎಣಿಸದೆ ವರದಿಯನ್ನು ಶಿಫಾರಸು ಮಾಡಬೇಕು. 2012ರಲ್ಲಿ ವರದಿ ಸರ್ಕಾರದ ಕೈ ಸೇರಿದ್ದರೂ ಸರ್ಕಾರಗಳು ಇದುವರೆಗೂ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ. ಜನಾಂಗವನ್ನು ಸಮಾಧಾನ ಪಡಿಸಲೆಂದು ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಅಕ್ಟೋಬರ್ 12ರಂದೇ ನಿಗಮವನ್ನು ಲೋಕಾರ್ಪಣೆ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಬದಲಾಗಲಿದೆ ಎಂದು ತಿಳಿಸಿದರು.

‘ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೈತ್ರಿ ಸರ್ಕಾರದಲ್ಲಿ ಮಾದಿಗರಿಗೆ ಪ್ರಾತಿನಿಧ್ಯ ನೀಡಿಲ್ಲ. ಕಾಂಗ್ರೆಸ್, ಜೆಡಿಎಸ್ ನಲ್ಲಿರುವ ನಮ್ಮ ಸಮುದಾಯದವರಿಗೆ ಕನಿಷ್ಠ 3 ಮಂದಿಗೆ ಮಂತ್ರಿ ಸ್ಥಾನ ನೀಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಕಡೆಗಣಿಸಿದರೆ ರಾಜ್ಯಾದ್ಯಂತ ಮತ ಜಾಗೃತಿ ಮಾಡುತ್ತೇವೆ’ ಎಂದರು.

ಎಲ್ಲ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸುತ್ತೇವೆ. 2019 ರಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದೆ. ಸದಾಶಿವ ಆಯೋಗದ ವರದಿಗೆ ತಡೆ ಮಾಡುತ್ತಿರುವವರ ವಿರುದ್ಧ ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದರು.

ಹಿರಿಯ ಮುಖಂಡ ಚಂದೇನಹಳ್ಳಿ ಮುನಿಯಪ್ಪ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿರುವ ನಾವು, ಸ್ವಾತಂತ್ರ್ಯದ ನಂತರವೂ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲಿಕ್ಕೆ ಸಾಧ್ಯವಾಗದಿರುವಷ್ಟರ ಮಟ್ಟಿಗೆ ಶೋಷಣೆ ಮಾಡಲಾಗುತ್ತಿದೆ’ ಎಂದರು.

‘ನಮಗೆ ಸಿಗಬೇಕಾಗಿರುವ ಶಿಕ್ಷಣ, ಸರ್ಕಾರಿ ನೌಕರಿಗಳು ಸೇರಿದಂತೆ ಎಲ್ಲ ಮೀಸಲಾತಿ ಪ್ರಾತಿನಿಧ್ಯಗಳನ್ನು ಕಸಿದುಕೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ.

‘ಸರ್ಕಾರವೇ ನೇಮಕ ಮಾಡಿದ್ದ ಸಮಿತಿ ನೀಡಿದ ವರದಿಯನ್ನು ಅನುಷ್ಠಾನಗೊಳಿಸಲಿಕ್ಕಾಗಿ ಇಷ್ಟೊಂದು ವಿಳಂಬ ಮಾಡುವುದು ಅಗತ್ಯವಾಗಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ನಮ್ಮ ಸಹೋದರರು, ವರದಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು’ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಡಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಯಾವ ಕಾರಣಕ್ಕಾಗಿ ಅನುಷ್ಠಾನಗೊಳಿಸಬಾರದು ಎಂಬುದನ್ನು ಬಹಿರಂಗವಾಗಿ ಚರ್ಚಿಸಲಿ ಎಂದರು.

ಮುಖಂಡರಾದ ಮುನಿರಾಜು, ಭಟ್ರೇನಹಳ್ಳಿ ನಾರಾಯಣಪ್ಪ, ಎಚ್.ಎಂ.ಕೃಷ್ಣಪ್ಪ, ಚಿನ್ನಪ್ಪ, ಗಂಗರೆಡ್ಡಿ, ಮುದುಗುರ್ಕಿ ಮೂರ್ತಿ, ಕದಿರಪ್ಪ, ವೆಂಕಟೇಶ್ ಪ್ರಭು, ರಾಘವ, ಗಂಗಣ್ಣ, ವೆಂಕಟಪ್ಪ, ಕಲಾವಿದ ಮುನಿರಾಜು, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !