ಸೋಮವಾರ, ಸೆಪ್ಟೆಂಬರ್ 16, 2019
27 °C
ನಂದಿಬೆಟ್ಟಕ್ಕೆ ಹೊರಟಿದ್ದ ವೇಳೆ ಉರುಳಿಬಿದ್ದ ಕಾರು

ದೇವನಹಳ್ಳಿ: ಹುಟ್ಟಹಬ್ಬ ಸಂಭ್ರಮದಲ್ಲೇ ಅಪಘಾತ; ನಾಲ್ವರ ದುರ್ಮರಣ

Published:
Updated:
Prajavani

ವಿಜಯಪುರ/ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಸಮೀಪದ ಹಂದರಹಳ್ಳಿಯಲ್ಲಿ ಶನಿವಾರ ನಸುಕಿನಲ್ಲಿ ಕಾರೊಂದು ಉರುಳಿ ಬಿದ್ದಿದ್ದು, ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ನಕ್ಕಲಪಲ್ಲಿ ನಿವಾಸಿ ಮಲ್ಲಿಕಾರ್ಜುನ ರೆಡ್ಡಿ (26), ಚಾಕವೇಲು ಗ್ರಾಮದ ನಾಗರಾಜ (25), ಮರವಪಲ್ಲಿ ಗ್ರಾಮದ ಅಶೋಕ್‌ ರೆಡ್ಡಿ (24) ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿಯ ಸುಂದರ್ (25) ಮೃತರು.

ಅಪಘಾತದ ವೇಳೆ ಕಾರಿನಲ್ಲಿದ್ದ ಗಿರೀಶ್, ರಮೇಶ್, ಮಂಜುನಾಥ್, ಅಶೋಕ ಹಾಗೂ ರಘುನಾಥರೆಡ್ಡಿ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೊಸಕೋಟೆ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಾಲಕ ನಿರ್ಲಕ್ಷ್ಯದಿಂದ ಕಾರು ಓಡಿಸಿದ್ದೇ ಅಪಘಾತಕ್ಕೆ ಕಾರಣವೆಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. 

ನಂದಿಬೆಟ್ಟಕ್ಕೆ ಹೊರಟಿದ್ದಾಗ ಅವಘಡ: ‘ಕೆ.ಆರ್.ಪುರ ಸಮೀಪದ ಆವಲಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ ಎಂಬುವರ ಹುಟ್ಟುಹಬ್ಬವಿತ್ತು. ಅದರ ಆಚರಣೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತರೆಲ್ಲರೂ ಮಲ್ಲಿಕಾರ್ಜುನ ಅವರಿಗೆ ಶುಭ ಕೋರಿದ್ದರು. ಒಟ್ಟಿಗೆ ಎಲ್ಲರೂ ಊಟ ಮಾಡಿದ್ದರು’ ಎಂದು ಚನ್ನರಾಯಪಟ್ಟಣ ಪೊಲೀಸರು ತಿಳಿಸಿದರು.

‘ಶನಿವಾರ ಹಾಗೂ ಭಾನುವಾರ ರಜೆ ಇದ್ದಿದ್ದರಿಂದಾಗಿ ಸ್ನೇಹಿತರೆಲ್ಲರೂ ನಂದಿಬೆಟ್ಟಕ್ಕೆ ಹೋಗಲು ತೀರ್ಮಾನಿಸಿದ್ದರು. ಮಹೀಂದ್ರಾ ಜೈಲೊ ಕಾರಿನಲ್ಲಿ ಆವಲಹಳ್ಳಿಯಿಂದ ದೇವನಹಳ್ಳಿ ಮಾರ್ಗವಾಗಿ ನಂದಿಬೆಟ್ಟದತ್ತ ಹೊರಟಿದ್ದರು’ ಎಂದರು.

‘ನಸುಕಿನ 3.30ರ ಸುಮಾರಿಗೆ ಹಂದರಹಳ್ಳಿ ಬಳಿ ಕಾರು ಉರುಳಿ ಬಿದ್ದಿತ್ತು. ಗಾಯಾಳುಗಳ ನರಳಾಟ ಕೇಳಿ ಸ್ಥಳೀಯರು ಸಹಾಯಕ್ಕೆ ಬಂದಿದ್ದರು. ಅಷ್ಟರಲ್ಲೇ ನಾಲ್ವರು ಮೃತಪಟ್ಟಿದ್ದರು. ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

Post Comments (+)