ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧಕರಿಗೆ ಶಿಸ್ತು, ಸಮಯದ ಸಾರ್ಥಕತೆ ಅಗತ್ಯ’

‘ಯುವನಾಯಕತ್ವ ಅಂದು ಮತ್ತು ಇಂದು’ ಕಾರ್ಯಾಗಾರಕ್ಕೆ ಚಾಲನೆ
Last Updated 12 ಅಕ್ಟೋಬರ್ 2019, 13:17 IST
ಅಕ್ಷರ ಗಾತ್ರ

ದೇವನಹಳ್ಳಿ: ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಇತಿಹಾಸ ಪುಟದಲ್ಲಿರುವ ಚರಿತ್ರಾರ್ಹ ಯುವ ಸಾಧಕರ ಬಗ್ಗೆ ಯುವಸಮುದಾಯ ತಿಳಿದುಕೊಳ್ಳಬೇಕಾಗಿದೆ ಎಂದು ಖ್ಯಾತ ವಕೀಲ ಡಾ.ಸಿ.ಎಸ್. ದ್ವಾರಕನಾಥ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು ಎನ್.ಸಿ.ಸಿ. ಘಟಕದ ಸಹಭಾಗಿತ್ವದಲ್ಲಿ ನಡೆದ ಯುವನಾಯಕತ್ವ ಅಂದು ಮತ್ತು ಇಂದು ವಿಷಯದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಯುವ ಮನಸ್ಸುಗಳು ಭವಿಷ್ಯದ ಕನಸ್ಸನ್ನು ಕಾಣಬೇಕು, ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳಬೇಕು, ಪ್ರಭುದ್ಧತೆ, ಸನ್ನಡತೆ, ಶಿಸ್ತು, ಸಮಯದ ಸಾರ್ಥಕತೆ ಮಾಡಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ’ ಎಂದರು.

ಇತಿಹಾಸ ಅವಲೋಕಿಸಿದಾಗ ಯುವಜನಾಂಗ ಮಾಡಿದ ಸಾಧನೆಗಳಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ, ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದನ್ನು ಮೊದಲು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ದೇವನಹಳ್ಳಿಯಲ್ಲಿ ಒಬ್ಬ ಸಾಮಾನ್ಯ ಸೈನಿಕನ ಮಗನಾಗಿ ಹುಟ್ಟಿದ ಟಿಪ್ಪು ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಾಧನೆ ಯುವಸಮುದಾಯಕ್ಕೆ ಮಾದರಿ, ಉಪಗ್ರಹದ ಪರಿಕಲ್ಪನೆ, ಬಯಲು ಸೀಮೆ ಪ್ರದೇಶಕ್ಕೆ ಪರ್ಷಿಯಾದಿಂದ ರೇಷ್ಮೆಯನ್ನು ಕೊಡುಗೆ ನೀಡಿದ್ದು ಟಿಪ್ಪು ಎಂಬುದನ್ನು ಯಾರು ಮರೆಯುವಂತಿಲ್ಲ ಎಂದರು.

ಒಡೆಯರ್ ಅವರ ಸಮಕಾಲಿನ ಅವಧಿಯಲ್ಲಿ ಪ್ರಬುದ್ಧಮಾನಕ್ಕೆ ಬಂದ ಯುವಸಮುದಾಯದ ಮಾರ್ಗದರ್ಶಕ ಸ್ವಾಮಿ ವಿವೇಕಾನಂದ ಬದುಕಿದ್ದು ಕೇವಲ 45 ವರ್ಷವಾದರೂ ಭಾರತ ಪರಂಪರೆಯನ್ನು ವಿಶ್ವಕ್ಕೆ ಅನಾವರಣಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

‘ಡಾ.ಅಂಬೇಡ್ಕರ್ ಅವರನ್ನು ಬರಿ ಮೀಸಲು ನೀಡಿದ ವ್ಯಕ್ತಿ ಎಂದು ಹೇಳುವವರ ಸಂಖ್ಯೆ ಹೆಚ್ಚು. ಸಂವಿಧಾನ ರಚನೆಯಲ್ಲಿ ಅವರ ದೂರದೃಷ್ಟಿ ಚಿಂತನೆ ಎಷ್ಟಿತ್ತು ಎಂಬುದನ್ನು ಸಂವಿಧಾನ ಓದಿದವರಿಗೆ ಮಾತ್ರ ಅರ್ಥವಾಗಲಿದೆ’ ಎಂದು ಹೇಳಿದರು.

ಕಠಿಣ ಪರಿಶ್ರಮ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ, ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಬೇಕು. ಕಟ್ಟಕಡೆಯ ವ್ಯಕ್ತಿಯ ನೋವನ್ನು ಅರ್ಥಮಾಡಿಕೊಳ್ಳಬೇಕು, ಹೃದಯ ಶ್ರೀಮಂತಿಕೆ ಇರಬೇಕು, ಸಮಾಜ ಎಲ್ಲವನ್ನು ನೀಡುತ್ತದೆ. ಭವಿಷ್ಯದಲ್ಲಿ ಸಮಾಜಕ್ಕೆ ಕೊಡುಗೆಗಳಾಗಬೇಕು ಎಂದು ಹೇಳಿದರು.

ವಾಣಿಜ್ಯ ವಿಭಾಗ ಸಂಯೋಜಕ ಡಾ. ಸತ್ಯನಾರಾಯಣಗೌಡ ಮಾತನಾಡಿ, ‘ಇತಿಹಾಸ ತೆರೆದ ಪುಸ್ತಕವಿದ್ದಂತೆ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲು ಇಲಾಖೆ ಶ್ರಮಿಸುತ್ತಿದೆ, ಯುವಪಡೆಯೇ ದೇಶದ ಸಂಪನ್ಮೂಲಗಳು, ದಿಕ್ಕು ತಪ್ಪಬಾರದು ಯುವ ಸಾಧಕರ ಜೀವನ, ಹೋರಾಟ, ವ್ಯಕ್ತಿತ್ವದ ಬಗ್ಗೆ ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ಕೆ.ಎಸ್. ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಎನ್.ಸಿ.ಸಿ. ಘಟಕ ಮುಖ್ಯಸ್ಥ ಡಾ.ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವಿಚಂದ್ರ, ಉಪನ್ಯಾಸಕಿ ಡಾ.ಅರ್ಚನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT