ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಪುನಶ್ಚೇತನಕ್ಕೆ ಕ್ರಮ ಅಗತ್ಯ

Last Updated 21 ಆಗಸ್ಟ್ 2019, 13:47 IST
ಅಕ್ಷರ ಗಾತ್ರ

ದೇವನಹಳ್ಳಿ: ‘ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಜೊತೆಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳ ಪುನಃಶ್ಚೇತನ ಮಾಡದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ. ಮೊದಲು ಕೆರೆ ಅಭಿವೃದ್ಧಿಪಡಿಸಲು ಏನು ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಸದಸ್ಯ ಕಾರಹಳ್ಳಿ ಶ್ರೀನಿವಾಸ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಕೆರೆ ಅಭಿವೃದ್ಧಿ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ‘ಕರಾವಳಿ, ಕೊಡಗು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ನೆರೆಹಾವಳಿ, ಬಯಲು ಸೀಮೆಯಲ್ಲಿ ಮಳೆಗಾಲ ಅರ್ಧ ಮುಗಿದರೂ ಮೇವಿಲ್ಲ. ಕುಡಿಯಲು ನೀರಿಲ್ಲ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಹತ್ತಾರು ಕೆರೆ ಅಭಿವೃದ್ಧಿಯಾಗಿದೆ’ ಎಂದು ಹೇಳಿದರು.

‘ಕೆರೆ ಅಭಿವೃದ್ಧಿಗಾಗಿ ಬೈಯಾಪ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಎತ್ತಿನಹೊಳೆ ಯೋಜನೆ ಮತ್ತು ನಾಗವಾರ ಹೆಬ್ಬಾಳ ವ್ಯಾಲಿ ಯೋಜನೆಯಲ್ಲಿ ನೂರಾರು ಕೋಟಿ ಹಣ ಬಿಡುಗಡೆ ಎಂದು ಸರ್ಕಾರ ಹೇಳುತ್ತಿದೆ. ಒಂದೇ ಒಂದು ಮಂಕರಿ ಕೆರೆಯಿಂದ ಹೂಳು ಎತ್ತಿರುವ ದಾಖಲೆ ಇಲಾಖೆಗಳಲಿಲ್ಲ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಂಜುನಾಥ್ ಮಾತನಾಡಿ ತಾಲ್ಲೂಕಿನಲ್ಲಿ.

ಒಟ್ಟು 114 ಕೆರೆಗಳ ಪೈಕಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 14 ಕೆರೆಗಳಿವೆ. ಪ್ರಸ್ತುತ ನಮ್ಮ ವ್ಯಾಪ್ತಿಯಲ್ಲಿರುವ ಕೆರೆಗಳ ಪೈಕಿ ಬೆಟ್ಟೆನಹಳ್ಳಿ, ತಿಂಡ್ಲು, ಪೆದ್ದನಹಳ್ಳಿ, ಚೌಡಪ್ಪನಹಳ್ಳಿ, ಮಾರಗೊಂಡನಹಳ್ಳಿ, ರಬ್ಬನಹಳ್ಳಿ, ಸುಣ್ಣಘಟ್ಟ, ಜಾಲಿಗೆ, ದಿನ್ನೆಸೊಲೂರು ಕೆರೆ ವ್ಯಾಪ್ತಿಯಲ್ಲಿ 97.30 ಹೆಕ್ಟೇರ್‌ ಪ್ರದೇಶ ಒತ್ತುವರಿಯಾಗಿದೆ. ಹದ್ದು ಬಸ್ತು ಮಾಡಲು ಒಟ್ಟು ₹ 50 ಲಕ್ಷ ಅನುದಾನ ಬಂದಿದೆ. ಕಂದಾಯ ಇಲಾಖೆ ಸರ್ವೆಯರ್ ಮೂಲಕ ಅಳತೆ ಮಾಡಿ ಗಡಿ ಗುರುತಿಸಿ ಕೊಡಬೇಕು. ಕೆರೆ ಅಭಿವೃದ್ಧಿಗೆ ಸದ್ಯ ಅನುದಾನ ಬಂದಿಲ್ಲ ಎಂದು ಸಭೆಗೆ ತಿಳಿಸಿದರು.

ನಂತರ ಮಾತನಾಡಿದ ಸದಸ್ಯರಾದ ದಿನ್ನೂರು ವೆಂಕಟೇಶ್, ‘ಭೀಮರಾಜು ಈ ಹಿಂದಿನ ಡಿ.ಸಿ.ಕರೀಗೌಡ ಜಲಮೂಲ ರಕ್ಷಣೆಗೆ ಕೆರೆಗಳ ಅಭಿವೃದ್ಧಿ, ನೀಲಗಿರಿ ತೆರವು, ಮಳೆ ಕೊಯ್ಲು, ಜಲಶಕ್ತಿ ಅಭಿಯಾನದ ಮೂಲಕ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ಈಗ ಬಂದಿರುವ ಜಿಲ್ಲಾಧಿಕಾರಿ ಮುಂದುವರಿಸುವುದು ಅನಿವಾರ್ಯ’ ಎಂದಾಗ ಸದಸ್ಯರು ಒಕ್ಕೊರಲಿನಿಂದ ಸಹ ಮತ ವ್ಯಕ್ತಪಡಿಸಿದರು.

ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಕಳೆದ ಒಂದು ವರ್ಷದಿಂದ ವೃದ್ಧರು, ಅಂಗವಿಕಲರು, ವಿಧವೆಯರು, ಸಾಮಾಜಿಕ ಭದ್ರತೆಯ ಪ್ರೋತ್ಸಾಹಧನಕ್ಕಾಗಿ ಕಚೇರಿಗೆ ನೂರಾರು ಮಂದಿ ಅಲೆಯುತ್ತಿದ್ದಾರೆ. ದಂಡಾಧಿಕಾರಿಗಳಾದ ನಿಮಗೆ ಅವರ ನೋವು ಅರ್ಥವಾಗುವುದಿಲ್ಲ. ನಿಮಗೆ ಒಂದು ವರ್ಷದಿಂದ ವೇತನ ಸಿಗದಿದ್ದರೆ ಸಮ್ಮನೆ ಕೂರುತ್ತೀರಾ ಏನು ಕ್ರಮ ತೆಗೆದುಕೊಂಡಿದ್ದೀರಾ’ ಎಂದು ತಹಶೀಲ್ದಾರ್‌ರನ್ನು ಪ್ರಶ್ನಿಸಿದರು.

ತಹಶೀಲ್ದಾರ್ ಬಾಲಕೃಷ್ಣ ಮಾತನಾಡಿ, ‘ಶೇ 90ರಷ್ಟು ಮಂದಿಗೆ ವಿತರಣೆಯಾಗಿದೆ ಶೇ 10ರಷ್ಟು ಮಂದಿಗೆ ತಲುಪಿಲ್ಲದಿರಬಹುದು ಎಂದು ಹೇಳಿದಾಗ ಆಕ್ರೋಶಗೊಂಡ ಸದಸ್ಯ ದಾಖಲೆ ಇಲ್ಲಿದೆ ನೋಡಿ ಎಂದಾಗ ಖಜಾನೆ ಇಲಾಖೆಯಲ್ಲಿ ತಡೆಯಾಗಿರಬಹುದು ಎಂದು ಬಾಲಕೃಷ್ಣ ಹೇಳಿದರು. ಒಂದು ವಾರದೊಳಗೆ ಸಂದಾಯವಾಗದಿದ್ದರೆ ಕಚೇರಿಗೆ ವೃದ್ಧರಿಂದ ಮುತ್ತಿಗೆ ಹಾಕಿಸುತ್ತೇನೆ ಎಂದರು.

ಸದಸ್ಯ ಭೀಮರಾಜು ಮಾತನಾಡಿ, ‘ಸಾಮಾಜಿಕ ಭದ್ರತೆಯಡಿ ಎಷ್ಟು ಅರ್ಹ ಫಲಾನುಭವಿಗಳಿದ್ದಾರೆ? ಮಾಹಿತಿ ನೀಡಿ ಎಂದಾಗ ನನ್ನ ಬಳಿ ಇಲ್ಲ ಅದಕ್ಕಾಗಿ ಬೇರೆ ಅಧಿಕಾರಿಗಳಿದ್ದಾರೆ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷೆ ಲಲಿತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ, ವಿವಿಧ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT