ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ’

ಕಡಲೇಬೆಳೆ ಬೀಜೋತ್ಪಾದನೆ ಕ್ಷೇತ್ರೋತ್ಸವ
Last Updated 3 ಜನವರಿ 2019, 13:01 IST
ಅಕ್ಷರ ಗಾತ್ರ

ವಿಜಯಪುರ: ರೈತರು ಗುಣಮಟ್ಟದ ಬೀಜ ಉತ್ಪಾದನೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ಚನ್ನರಾಯಪಟ್ಟಣ ಹೋಬಳಿ ಬೀಡಿಗಾನಹಳ್ಳಿ ರೈತ ರಾಜಣ್ಣ ಅವರ ತೋಟದಲ್ಲಿ ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಕಡಲೇಬೆಳೆ ಬೀಜೋತ್ಪಾದನೆ ಕ್ಷೇತ್ರೋತ್ಸವ’ ಉದ್ಘಾಟಿಸಿ ಮಾತನಾಡಿದರು.

ಹನಿ ನೀರಾವರಿಗಿಂತ ತುಂತುರು ನೀರಾವರಿ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಬೇಕು. ಸರ್ಕಾರ ಕೂಡ ಇಸ್ರೇಲ್ ಮಾದರಿಯಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಲು ನೀರಿನ ನಿರ್ವಹಣೆ ಮಾಡಲು ತಯಾರಿ ನಡೆಸುತ್ತಿದೆ. ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದೆ. ಇದಕ್ಕೆ ತಕ್ಕಂತೆ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಂ.ಎಸ್.ನಟರಾಜ್ ಮಾತನಾಡಿ, ದೇಶದಲ್ಲಿ 800 ಮಿಲಿಯನ್ ಆಹಾರ ಉತ್ಪಾದನೆಯಾಗುತ್ತಿದೆ. ರೈತರು ದ್ವಿದಳ ಧಾನ್ಯ ಹೆಚ್ಚಿಗೆ ಬೆಳೆಯಬೇಕು. ಬೀಜೋತ್ಪಾದನೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಹಂಚಿಕೊಂಡಾಗ ಈ ಬಗ್ಗೆ ಸಂಶೋಧನೆಗಳು ನಡೆಸಲು ಅನುಕೂಲವಾಗಲಿದೆ ಎಂದರು.

ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ ಮಾತನಾಡಿ, ತಾಂತ್ರಿಕವಾಗಿ ಹೊಸ ಸಂಶೋಧನೆ ಆಗಬೇಕಾಗಿದೆ. 200 ಹೊಸ ಬಿತ್ತನೆ ಬೀಜಗಳ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಮಾಣಿತ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ಕಡೆಗೆ ರೈತರು ಗಮನಹರಿಸಬೇಕು ಎಂದರು.

ಸಹ ವಿಸ್ತರಣಾಧಿಕಾರಿ ಡಾ.ಕೆ.ನಾರಾಯಣಗೌಡ ಮಾತನಾಡಿ, ರೈತರು ಉತ್ತಮ ವಿಜ್ಞಾನಿಗಳಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್ ಮಾತನಾಡಿ, ರೈತರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಭೂಮಿಯಲ್ಲಿ ಕೊರತೆಯಿರುವ ಅಂಶಗಳನ್ನು ನೀಡಬೇಕು. ಸರ್ಕಾರದಿಂದ ರೈತರಿಗೆ ನೀಡುವ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

ಬೀಜ ತಯಾರಿಕೆ: ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಬೀಡಿಗಾನಹಳ್ಳಿ ಮಂಜುನಾಥ್ ಮಾತನಾಡಿ, ಖಾಸಗಿ ಕಂಪನಿ ದುಬಾರಿ ಬೆಲೆಗೆಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದೆ. ಆದ್ದರಿಂದ ಬಿತ್ತನೆ ಬೀಜಗಳನ್ನು ನಾವೇ ಉತ್ಪಾದನೆ ಮಾಡುತ್ತಿದ್ದು, ‌ಸಹಕಾರ ನೀಡಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಕುಲಪತಿ ರಾಜೇಂದ್ರ ಪ್ರಸಾದ್, ತೋಟಗಾರಿಕೆ ಬೆಳೆಗಳಿಗಿಂತ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಿಸಬೇಕಾಗಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಬಿತ್ತನೆ ಬೀಜಗಳ ಬೆಲೆ ಕಡಿಮೆಯಿರಬಹುದು. ಆದರೆ, ಗುಣಮಟ್ಟದ ಇಳುವರಿ ಸಿಗುತ್ತದೆ. ಖಾಸಗಿ ಕಂಪನಿಗಳು ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತವೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳಾ, ಕೃಷಿ ಅಧಿಕಾರಿ ಮಣಿಲಾ, ಶ್ರೀಕುಮಾರ್, ಎಂ.ಮುನಿಕೃಷ್ಣಪ್ಪ, ಕೃಷ್ಣಪ್ಪ, ಡಾ.ಟಿ.ಎಂ.ರಮಣಪ್ಪ, ಡಾ.ಪರಶಿವಮೂರ್ತಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT