ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

Last Updated 21 ಅಕ್ಟೋಬರ್ 2021, 6:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಮಾಯಣದಲ್ಲಿ ಬಿಂಬಿತವಾಗಿರುವ ಹಲವಾರು ಅಂಶಗಳು ಸಮಾಜದ ಏಳಿಗೆಗೆ ದಾರಿದೀಪವಾಗಿವೆ. ಹಿಂದುಳಿದ ಸಮುದಾಯಗಳು ತಮಗೆ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಾಯಣ ರಚಿಸಿದ ವಾಲ್ಮೀಕಿ ಅವರ ಜೀವನ ಕುರಿತು ಅನೇಕ ರೀತಿಯ ಉಲ್ಲೇಖಗಳಿವೆ. ಆದರೆ ಅದರ ವಾಸ್ತವಿಕತೆಯನ್ನು ಅರಿಯಲು ಪ್ರಯತ್ನಿಸಬೇಕು. ರಾಮಾಯಣ ಮಹಾಕಾವ್ಯ ಪ್ರೀತಿ, ತ್ಯಾಗ, ಸಹನೆ, ಪ್ರಕೃತಿ ಸೌಂದರ್ಯ, ವಿರಹ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದರು.

ಸರ್ಕಾರದಿಂದ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಹಲವಾರು ಸೌಲಭ್ಯಗಳು ದೊರೆಯುತ್ತಿವೆ. ನಗರದ ಪರಿಶಿಷ್ಟ ಪಂಗಡದ ವಸತಿ ಶಾಲೆಗೆ ಸರ್ವೆ ನಂ. 118ರಲ್ಲಿ ಅರ್ಧ ಎಕರೆ ಜಾಗ ಮಂಜೂರಾಗಿದೆ. ವೀರಭದ್ರನಪಾಳ್ಯದಲ್ಲಿ ವಾಲ್ಮೀಕಿ ಭವನಕ್ಕೆ 1 ಎಕರೆ ಮಂಜೂರಾಗಿದೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ₹ 1.5 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈಗ ಪರಿಶಿಷ್ಟ ಪಂಗಡದವರಿಗೆ ಹಕ್ಕುಪತ್ರ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜೀವನದ ಮೌಲ್ಯ, ಬದುಕಿನ ಸಿದ್ಧಾಂತವನ್ನು ರಾಮಾಯಣದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು |
ಹೇಳಿದರು.

ಡಿವೈಎಸ್‌ಪಿ ಟಿ. ರಂಗಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ರಜೆಗೆ ಮಾತ್ರ ಸೀಮಿತವಾಗಬಾರದು. ವಾಲ್ಮೀಕಿ ಜೀವನ ಸಾರವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಿದೆ. ಆದರೆ ಈ ಕಾವ್ಯವನ್ನು ವಯಸ್ಸಾದ ನಂತರ ಅಧ್ಯಯನಕ್ಕೆ ಮುಂದಾಗುತ್ತಿರುವುದು ವಿಪರ್ಯಾಸ. ರಾಮಾಯಣ ಮಹಾಕಾವ್ಯದ ನೀತಿ ಸಾರವನ್ನು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ತಿಳಿಸಬೇಕಿದೆ. ಅದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪರಿಶಿಷ್ಟ ಪಂಗಡದ 23 ಮಂದಿ ಫಲಾನುಭವಿಗಳಿಗೆ ಸ್ವಾಧೀನತೆಯಲ್ಲಿರುವ ಅರಣ್ಯ ಭೂಮಿಗಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎಸ್. ಶಿವರಾಜು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ರಸಾದ್, ಸಹಾಯಕ ನಿರ್ದೇಶಕ ಸೋಮಶೇಖರ್, ಬಿಇಒ ಶುಭಮಂಗಳಾ, ಎಪಿಎಂಸಿ ನಿರ್ದೇಶಕ ಎಂ. ಮಂಜುನಾಥ್‌, ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್, ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT