ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: 8 ವರ್ಷ ಬಳಿಕ ಕೊಲೆ ಆರೋಪಿಗಳ ಸೆರೆ

ಅಕ್ರಮ ಸಂಬಂಧಕ್ಕೆ ಅಡ್ಡಿ: ಸ್ವಂತ ತಮ್ಮನನ್ನೇ ತುಂಡು ತುಂಡಾಗಿ ಕತ್ತರಿಸಿದ್ದ ಅಕ್ಕ
Last Updated 19 ಮಾರ್ಚ್ 2023, 4:50 IST
ಅಕ್ಷರ ಗಾತ್ರ

ಆನೇಕಲ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಕೊಲೆ ಮಾಡಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧ ಜಾಗಗಳಲ್ಲಿ ಎಸೆದು ಪರಾರಿಯಾಗಿದ್ದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಎಂಟು ವರ್ಷದ ಬಳಿಕ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭಾಗ್ಯಶ್ರೀ (31) ಮತ್ತು ಸಿಂದಗಿ ತಾಲ್ಲೂಕಿನ ಸಾಸುಬಾಳು ಗ್ರಾಮದ ಸುಪುತ್ರ ಶಂಕರಪ್ಪ ತಳವಾರ (32) ಬಂಧಿತರು.

ಆರೋಪಿ ಭಾಗ್ಯಶ್ರೀ ತನ್ನ ತಮ್ಮ ನಿಂಗರಾಜು ಸಿದ್ದಪ್ಪ ಪೂಜಾರಿ ಜೊತೆ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ವಡೇರಮಂಚನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಇವರ ಮನೆಯಲ್ಲಿಯೇ ಸಿಂದಗಿ ತಾಲ್ಲೂಕಿನ ಸಾಸುಬಾಳು ಗ್ರಾಮದ ಸುಪುತ್ರ ತಳವಾರ ಕೂಡ ವಾಸವಿದ್ದರು.

ಸುಪುತ್ರ ತಳವಾರ ಹೆಂಡತಿಯನ್ನು ಬಿಟ್ಟು ಜಿಗಣಿಯಲ್ಲಿ ನೆಲೆಸಿದ್ದರು. ಭಾಗ್ಯಶ್ರೀ ಮತ್ತು ಸುಪುತ್ರ ತಳವಾರ ನಡುವಿನ ಅಕ್ರಮ ಸಂಬಂಧಕ್ಕೆ ಭಾಗ್ಯಶ್ರೀಯ ಸಹೋದರ ನಿಂಗರಾಜು ಅಡ್ಡಿಯಾಗಿದ್ದ. ಭಾಗ್ಯಶ್ರೀ ಮತ್ತು ಸುಪುತ್ರ ಸಂಚು ನಡೆಸಿ 2015ರ ಆಗಸ್ಟ್‌ 11 ರಂದು ನಿಂಗರಾಜುನನ್ನು ಹತ್ಯೆ ಮಾಡಿದ್ದರು. ಕೊಲೆ ಮುಚ್ಚಿಹಾಕಲು ದೇಹವನ್ನು ತುಂಡು ಮಾಡಿ ವಿವಿಧೆಡೆ ಎಸೆದು ಪರಾರಿಯಾಗಿದ್ದರು.

ಕೊಲೆ ಪ್ರಕರಣದ ಬಗ್ಗೆ ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ 2018ರಲ್ಲಿ ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ಸಿ ವರದಿ ಸಲ್ಲಿಸಲಾಗಿತ್ತು.

ಎಂಟು ವರ್ಷದಿಂದ ಪತ್ತೆಯಾಗದ ಪ್ರಕರಣವನ್ನು ಜಿಗಣಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಎಎಸ್ಪಿ ಪುರುಷೋತ್ತಮ್‌, ಡಿವೈಎಸ್ಪಿ ಲಕ್ಷ್ಮೀನಾರಾಯಣ್‌, ಸಿಪಿಐ ಸುದರ್ಶನ್‌ ಇದ್ದರು.

ಆರೋಪಿ ಪತ್ತೆಗೆ ಅನುಕೂಲವಾದ ವೈದ್ಯರ ಚೀಟಿ: ಹೋಟೆಲ್‌ವೊಂದರ ಹಿಂಭಾಗದಲ್ಲಿ ಖಾಲಿ ಜಾಗದಲ್ಲಿ ಎಸೆಯಲಾಗಿದ್ದ ಬ್ಯಾಗ್‌ನಲ್ಲಿ ತುಂಡು ತುಂಡಾಗಿ ಕತ್ತರಿಸಿದ್ದ ಮಾನವನ ದೇಹದ ಭಾಗಗಳು, ರಕ್ತದ ಕಲೆ ಹಾಗೂ ಜೊತೆಗೆ ವಡೇರಮಂಚನಹಳ್ಳಿ ವೈದ್ಯರ ಚೀಟಿಯೊಂದು ದೊರೆತಿತ್ತು.

ವೈದ್ಯರ ಚೀಟಿಯನ್ನು ಆಧರಿಸಿ ತನಿಖೆ ಕೈಗೊಂಡು ಪೊಲೀಸರು ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು, ಆರೋಪಿಗಳ ಬಗ್ಗೆ ಮಾಹಿತಿ ನೀಡಿದರು.

ಮನೆಯನ್ನು ಪರಿಶೀಲನೆ ನಡೆಸಿದಾಗ ಅವರು ಮನೆ ಖಾಲಿ ಮಾಡಿದ್ದ ವಿಚಾರ ತಿಳಿಯಿತು. ಆರೋಪಿಗಳ ಸುಳಿವು ದೊರೆತಿರಲಿಲ್ಲ. ಪೊಲೀಸರು ಆರೋಪಿಗಳ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದಾಗ ಆರೋಪಿಗಳು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಸಿನ್ನಾರ್‌ ತಾಲ್ಲೂಕಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ದೊರೆಯಿತು.

ಅಲ್ಲಿಗೆ ತೆರಳಿದ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾರೆ. ದೇಹದ ಅಂಗಾಂಗಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಮೃತ ದೇಹವು ನಿಂಗರಾಜು ಪೂಜಾರಿಯ ದೇಹವೆಂದು ದಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT