ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಹಿಪ್ಪು ನೇರಳೆಗೆ ಗಣಿ ದೂಳು, ಬೆಳೆಗಾರರಲ್ಲಿ ಆತಂಕ

Last Updated 28 ಜನವರಿ 2020, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿರುವ ನೂರಾರು ರೇಷ್ಮೆ ಬೆಳೆಗಾರರು ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿನ ಮೇಲೆ ಗಣಿ ದೂಳು ಅವರಿಸಿ ಬೆಳೆಗಾರರಿಗೆ ಗೋಳು ತರಿಸಿದೆ.

‘ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿರುವ ಕೊಯಿರಾ, ಮಾಯಸಂದ್ರ, ಚಿಕ್ಕಗೊಲ್ಲಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ, ಮುದ್ದನಾಯಕನಹಳ್ಳಿ, ಕಾರಹಳ್ಳಿ ಮತ್ತು ಸೊಣ್ಣೆನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಪಾರ ರೇಷ್ಮೆಗೂಡು ಸಾಕಾಣಿಕೆಗೆ ಬೆಳೆಯುತ್ತಿರುವ ಹಿಪ್ಪು ನೇರಳೆ ಸೊಪ್ಪಿನ ಮೇಲೆ ಹೆಚ್ಚುತ್ತಿರುವ ಗಣಿ ದೂಳಿನಿಂದಾಗಿ ಹುಳು ಸಾಕಾಣಿಕೆ ಮಾಡಬೇಕೋ ಹಾಗೆಯೇ ಬಿಡಬೇಕೋ ಎಂಬ ಆಂತಕ ಹೆಚ್ಚುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂಬುದು ರೈತರ ಅಳಲು.

ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಕಲ್ಲಿನ ಕ್ವಾರಿ ಮತ್ತು ಖಾಸಗಿ ಟ್ಯಾಂಕರ್ ಮೂಲಕ ದುಬಾರಿ ಬೆಲೆಯಲ್ಲಿ ನೀರು ಖರೀದಿಸಿ ಬೆಳೆ ಉಳಿಸುವ ಪ್ರಯತ್ನ ಮಾಡುತ್ತಿರುವುದು ಒಂದೆಡೆಯಾದರೆ ಹುಳು ಸಾಕಾಣಿಕೆ ಸಂದರ್ಭದಲ್ಲಿ ಸೊಪ್ಪಿನ ಅಭಾವ ಹೆಚ್ಚುತ್ತಿದೆ. ಒಂದು ಚೀಲ ಹಿಪ್ಪು ನೇರಳೆ ಸೊಪ್ಪು ಒಂದು ಸಾವಿರಕ್ಕೆ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ.

ಅನಿವಾರ್ಯವಾಗಿ ನೀರು ಪ್ಲಾಸ್ಟಿಕ್ ಡ್ರಂ ಸಿಮೆಂಟ್ ತೊಟ್ಟಿಗಳಲ್ಲಿ ಶೇಖರಣೆ ಮಾಡಿ ಸೊಪ್ಪು ಕಟಾವಿನ ನಂತರ ತೊಳೆದು ಹಾಕಬೇಕು ಎಂದು ರೇಷ್ಮೆ ಬೆಳೆಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

2014–15 ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪಾಲಯ್ಯ ಮತ್ತು ಭೂ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ವಿಪರ್ಯಾಸವೆಂದರೆ ದಾಳಿ ಮಾಡಿ ಪ್ರಕರಣ ದಾಖಲಿಸಿದ ಸಂಬಂಧಿಕರ ಹೆಸರಿನಲ್ಲಿ ಮತ್ತೆ ಪರವಾನಗಿ ನೀಡಿದ್ದರು. ಅದರ ಫಲವೇ ಈಗ ನಾವು ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಮುದ್ದನಾಯಕನಹಳ್ಳಿ ರೈತ ರಮೇಶ್.

‘ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಕಚೇರಿ ಬಿಟ್ಟು ಹೊರ ಬರುವುದಿಲ್ಲ ಗಣಿಮಾಲಿಕರೆ ಕಚೇರಿಗೆ ಹೋಗುತ್ತಾರೆ ರೈತ ಕುಟುಂಬದಿಂದಲೇ ಬಂದಿರುವ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲವೆಂದರೆ ಹೇಗೆ’ ಎನ್ನುತ್ತಾರೆ ರೈತ ಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿದಲೂರು ರಮೇಶ್.

4 ಎಕರೆಯಲ್ಲಿ ಮರದ ಕಡ್ಡಿ ರೇಷ್ಮೆ ಬೆಳೆದಿದ್ದೇನೆ. ಗುಣಮಟ್ಟದ ಗೂಡು ಬರಲು ಗುಣಮಟ್ಟದ ಸೊಪ್ಪು ಅವಶ್ಯಕ. ಸೆಂಟ್ರಲ್ ಸಿಲ್ಕ್ ಬೊರ್ಡ್ ಮಾತ್ರ ಈ ರೇಷ್ಮೆ ಖರೀದಿಸುತ್ತದೆ. ಸ್ವಲ್ಪ ಎಡವಟ್ಟಾದರೂ ಹುಳವನ್ನು ತಿಪ್ಪೆಗೆ ಸುರಿಯಬೇಕು ಎನ್ನುತ್ತಾರೆ ಚಿಕ್ಕೆಗೌಡ. ಸೊಣ್ಣೆನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಿ ದೂಳಿನ ಸೊಂಕಿನಿಂದ ಗಂಟಲು ನೋವು, ಶ್ವಾಸಕೋಶಕ್ಕೆ ತೊಂದರೆ ಮತ್ತು ಕಣ್ಣುಗಳು ಕೆಂಪಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಎರಡು ವರ್ಷಗಳ ಹಿಂದೆ ಸರ್ಕಾರ ವರದಿ ನೀಡಿದ್ದರು.

ಕಲ್ಲು ಗಣಿಗಾರಿಕೆಯಿಂದ ರೇಷ್ಮೆ ಗೂಡು ಬೆಳೆವಣಿಗೆಗೆ ಪೆಟ್ಟು. ಒಂದೆರಡು ದಿನದಲ್ಲಿ ಬೆಳೆ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿಯನ್ನು ನೀಡಲಿದ್ದೇನೆ ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಟಿ.ಕುಮಾರ್ ಸ್ವಾಮಿ ಹೇಳಿದರು, ಗಣಿ ಧೂಳು ಹೆಚ್ಚುತ್ತಿರುವ ಕಾರಣ ಜ.21ರಂದು ಕಾರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗಣಿ ಮಾಲಿಕರ ಸಭೆ ಕರೆದು ಚರ್ಚಿಸಿ ಕಡಿವಾಣ ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ದೇವರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT