ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಮೂಲ್‌ ಚುನಾವಣೆ: ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವೆ ಏರ್ಪಟ್ಟ ಜಿದ್ದಾಜಿದ್ದಿ  

ನಿರ್ದೇಶಕ ಸ್ಥಾನ
Last Updated 26 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಬಮೂಲ್‌ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮೇ.12 ರಂದು ಚುನಾವಣೆ ನಡೆಯಲಿದ್ದು,ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

15 ದಿನಗಳ ಹಿಂದೆಯಷ್ಟೇ ಒಂದೇ ವೇದಿಕೆಯಲ್ಲಿ ಆತ್ಮೀಯರಂತೆ ಕುಳಿತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚಿಸಿದ್ದಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಈಗ ಈ ಚುನಾವಣೆಯಲ್ಲಿ ಮುಖಾಮುಖಿ ಆಗಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಮೂಲ್‌ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಇವರೇ ಪ್ರಬಲ ಅಭ್ಯರ್ಥಿಗಳು.

ಬಮೂಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎಚ್‌.ಅಪ್ಪಯ್ಯ ಅವರು ಒಂದು ವರ್ಷಗಳ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಈಗ ಮತ್ತೆ ಮೂರನೇ ಬಾರಿಗೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ ಬಮೂಲ್‌ ಕ್ಷೇತ್ರದಲ್ಲಿ 195 ಎಂಪಿಸಿಎಸ್‌ಗಳಿದ್ದು ಇವುಗಳ ಪೈಕಿ 149 ಸಂಘಗಳ ಅಧ್ಯಕ್ಷರು ಮಾತ್ರ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. 46 ಸಂಘಗಳು ಬಮೂಲ್‌ ವತಿಯಿಂದ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಐದು ಸಭೆಗಳಲ್ಲಿ ಮೂರಕ್ಕು ಸಹ ಹಾಜರಾಗದೆ ಇರುವ ಹಾಗೂ ಪ್ರತಿ ದಿನ ಸರಾಸರಿ 100 ಲೀಟರ್‌ ಹಾಲು ಸಂಗ್ರಹ ಸಾಮರ್ಥ್ಯ ಹೊಂದದೆ ಇರುವ ಸಂಘಗಳು ಮತ ಚಲಾಯಿಸುವ ಹಕ್ಕಿನಿಂದ ವಂಚಿತವಾಗಿವೆ. ಮತದಾನ ವಂಚಿತ ಸಂಘಗಳ ಅಧ್ಯಕ್ಷರು ನಮಗೂ ಮತ ಚಲಾಯಿಸುವ ಹಕ್ಕು ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಸದ್ಯದಲ್ಲೇ ತೀರ್ಪು ಬರುವ ನಿರೀಕ್ಷೆ ಇದೆ.

ದೊಡ್ಡಬಳ್ಳಾಪುರ ಕ್ಷೇತ್ರದಿಂದ ಸದ್ಯಕ್ಕೆ ಬಿಜೆಪಿಯಿಂದ ಟಿ.ವಿ.ಲಕ್ಷ್ಮೀನಾರಾಯಣ್‌, ವಾಣಿಗರಹಳ್ಳಿ ವೇಣು, ಕಾಂಗ್ರೆಸ್‌ ಪಕ್ಷದಿಂದ ಬಿ.ಸಿ.ಆನಂದ್‌, ಜೆಡಿಎಸ್‌ನಿಂದ ಹಾಲಿ ನಿರ್ದೇಶಕ ಎಚ್‌. ಅಪ್ಪಯ್ಯ, ಜಾಲಿಗೆರೆ ಚನ್ನೇಗೌಡ, ಕುಂಟನಹಳ್ಳಿ ಶಿವಕುಮಾರ್‌ಆಕಾಕ್ಷಿಗಳಾಗಿದ್ದಾರೆ.

ದೇವನಹಳ್ಳಿ ಬಮೂಲ್‌ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಈರೆಗೆನಹಳ್ಳಿ ಶ್ರೀನಿವಾಸ್‌, ಕಾಂಗ್ರೆಸ್‌ ಪಕ್ಷದಿಂದ ಎಸ್‌.ವಿ. ಮುನಿರಾಜು, ಸೋಮಣ್ಣ ಆಕಾಂಕ್ಷಿಗಳಾಗಿದ್ದಾರೆ. 146 ಸಂಘಗಳು ಮತದಾನಕ್ಕೆ ಅರ್ಹತೆ ಪಡೆದಿವೆ. 16 ಸಂಘಗಳು ಮತದಾನದ ಹಕ್ಕು ಹೊಂದಿಲ್ಲ.

ನೆಲಮಂಗಲ ಬಮೂಲ್‌ ಕ್ಷೇತ್ರದಿಂದ ಐದು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಜೆಡಿಎಸ್‌ ಅಭ್ಯರ್ಥಿ ತಿಮ್ಮರಾಯಪ್ಪ, ಕಾಂಗ್ರೆಸ್‌ನಿಂದ ಭಾಸ್ಕರ್‌ ಆಕಾಂಕ್ಷಿಗಳಾಗಿದ್ದಾರೆ. 118 ಸಂಘಗಳು ಮತದಾನದ ಹಕ್ಕು ಹೊಂದಿವೆ. 58 ಸಂಘಗಳು ಮತದಾನದ ಹಕ್ಕು ಹೊಂದಿಲ್ಲ.

ಹೊಸಕೋಟೆ ಬಮೂಲ್‌ ಕ್ಷೇತ್ರದಿಂದ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಹಾಗೂ ಅಧ್ಯಕ್ಷರಾಗಿದ್ದ ಹುಲ್ಲೂರು ಮಂಜುನಾಥ್‌ ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದಾರೆ. 136 ಸಂಘಗಳು ಮತದಾನದ ಹಕ್ಕು ಹೊಂದಿದ್ದು, 31 ಸಂಘಗಳು ಮತದಾನದಿಂದ ವಂಚಿತವಾಗಿವೆ.

ಬೆಂಗಳೂರು ಉತ್ತರ ಬಮೂಲ್‌ ಕ್ಷೇತ್ರದಿಂದ ಬಿಜೆಪಿಯಿಂದ ಬಿ.ಕೆ.ಮಂಜುನಾಥ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಇನ್ನು ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿಲ್ಲ. 136 ಸಂಘಗಳು ಮತದಾನದ ಹಕ್ಕು ಹೊಂದಿವೆ. 42 ಸಂಘಗಳು ಮತದಾನದ ಹಕ್ಕಿನಿಂದ ವಂಚಿತವಾಗಿವೆ.

ಬೆಂಗಳೂರು ಪೂರ್ವ ಬಮೂಲ್‌ ಕ್ಷೇತ್ರದಿಂದ ಸದ್ಯಕ್ಕೆ ಕಾಂಗ್ರೆಸ್‌ ಪಕ್ಷದಿಂದ ಬಿ.ಡಿ.ನಾಗಪ್ಪ ಅವರು ಆಕಾಂಕ್ಷಿಗಳಾಗಿದ್ದು, 115 ಸಂಘಗಳು ಮತ ಚಲಾಯಿಸುವ ಹಕ್ಕು ಹೊಂದಿವೆ. 35 ಸಂಘಗಳು ಮತದಾನದಿಂದ ವಂಚಿತವಾಗಿವೆ.

ಬೆಂಗಳೂರು ದಕ್ಷಿಣ ಬಮೂಲ್‌ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ಪಂಚಲಿಂಗಯ್ಯ ಆಕಾಂಕ್ಷಿಗಳಾಗಿದ್ದು, 105 ಸಂಘಗಳ ಅಧ್ಯಕ್ಷರು ಮತಚಲಾಯಿಸಲಿದ್ದಾರೆ. 62 ಸಂಘಗಳು ಮತದಾನದ ಹಕ್ಕು ಕಳೆದುಕೊಂಡಿವೆ.

ಆನೇಕಲ್‌ ಬಮೂಲ್‌ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಬಿಜೆಪಿ ಅಭ್ಯರ್ಥಿ ಆಂಜಿನಪ್ಪ, ಕಾಂಗ್ರೆಸ್‌ ಪಕ್ಷದಿಂದ ಆರ್‌.ಕೆ.ರಮೇಶ್‌, ಸೋಮಶೇಖರ್‌ ಆಕಾಂಕ್ಷಿಗಳಾಗಿದ್ದಾರೆ. 109 ಸಂಘಗಳು ಮತದಾನದ ಹಕ್ಕು ಹೊಂದಿವೆ. 47 ಸಂಘಗಳು ಮತದಾನದ ಹಕ್ಕು ಕಳೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT