ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿ: ಡಿ.ಕೆ.ಸುರೇಶ್ ಅಭಿಮತ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ
Last Updated 16 ಡಿಸೆಂಬರ್ 2018, 13:30 IST
ಅಕ್ಷರ ಗಾತ್ರ

ಆನೇಕಲ್: ‘ಅಭಿವೃದ್ಧಿಯ ಮೂಲಕ ಜನರ ಋಣ ತೀರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಹಾಗಾಗಿ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು‘ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕರ್ಪೂರಿನಲ್ಲಿ ಭುವನೇಶ್ವರಿ ಕನ್ನಡ ಸಂಘ ಹಾಗೂ ಡಿ.ಕೆ.ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ‘ಅಣ್ಣಮ್ಮ ದೇವಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಅಧಿಕಾರಾವಧಿಯಲ್ಲಿ ಜನಪ್ರತಿನಿಧಿಗಳು ಮಾಡಿದ ಕೆಲಸಗಳು ಸಾರ್ಥಕತೆಯನ್ನು ತರುವಂತಾಗಬೇಕು. ಜತೆಗೆ ಅಭಿವೃದ್ಧಿ ವಾತಾವರಣ ನಿರ್ಮಿಸಬೇಕು. ಆನೇಕಲ್ ತಾಲ್ಲೂಕಿನ 66 ಕೆರೆಗಳನ್ನು ತುಂಬಿಸುವ ಏತನೀರಾವರಿ ಯೋಜನೆ ಪ್ರಗತಿಯಲ್ಲಿದ್ದು ಇದರಿಂದಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. 1000–1500 ಅಡಿ ಬೋರ್‌ವೆಲ್‌ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ರೈತರು ಪರದಾಡುವಂತಾಗಿದೆ’ ಎಂದರು.

‘ಏತನೀರಾವರಿ ಯೋಜನೆ ಪೂರ್ಣವಾದ ನಂತರ ಅಂತರ್ಜಲ ಮಟ್ಟದಲ್ಲಿ ಸುಧಾರಣೆಯಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕರ್ಪೂರು, ಬಳ್ಳೂರು, ಸಮಂದೂರು, ವಣಕನಹಳ್ಳಿ ಗ್ರಾಮ ಪಂಚಾಯಿತಿಗಳು ಗಡಿ ಗ್ರಾಮ ಪಂಚಾಯಿತಿಗಳಾಗಿದ್ದು, ಆದಾಯದ ಮೂಲ ಕಡಿಮೆಯಿದ್ದು ಇದರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚು ಕಾಳಜಿ ವಹಿಸಬೇಕು‘ ಎಂದರು.

‘ಆನೇಕಲ್ ತಾಲ್ಲೂಕು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು ಇಲ್ಲಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹಾಲ್ದೇನಹಳ್ಳಿಯ ರೈಲ್ವೆ ಗೇಟ್ ಬಳಿ ಕಿ.ಮೀ. ದೂರ ವಾಹನ ದಟ್ಟನೆ ಉಂಟಾಗುತ್ತಿದೆ. ಹಾಗಾಗಿ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಿ ಶಾಶ್ವತ ಪರಿಹಾರ ನೀಡುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ‘ ಎಂದು ತಿಳಿಸಿದರು.

‘ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನವ ಹೆಚ್ಚು ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಪ್ರಾರ್ಥನೆ, ಧ್ಯಾನ, ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಒತ್ತಡವನ್ನು ನಿವಾರಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು‘ ಎಂದು ಹೇಳಿದರು.

ಕರ್ಪೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಪಿ.ರಮೇಶ್ ಮಾತನಾಡಿ, ’ಸಂಸದ ಡಿ.ಕೆ.ಸುರೇಶ್ ಅವರು ತಾಲ್ಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೂಲಸೌಕರ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ‘ ಎಂದು ಹೇಳಿದರು.

ಅಣ್ಣಮ್ಮ ದೇವಿ ಉತ್ಸವದ ಅಂಗವಾಗಿ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು. ಯುವರಾಜ್ ತಂಡ ಮತ್ತು ಸರಿಗಮಪ ಖ್ಯಾತಿಯ ಮೈತ್ರಿ, ಸುನೀಲ್ ಸೇರಿದಂತೆ ವಿವಿಧ ಕಲಾವಿದರು ಸಂಗೀತ ರ್ಯಕ್ರಮ ನಡೆಸಿಕೊಟ್ಟರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ಡಿವೈಎಸ್‌ಪಿ ನಂಜುಂಡೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಗೌಡ, ಮಡಿವಾಳ ಜಯರಾಜ್, ಜಿಗಣಿ ಪುನೀತ್, ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸಮ್ಮ, ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಕರ್ಪೂರು ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ಗೌಡ, ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಚ್ಯುತರಾಜು, ವ್ಯವಸಾಯ ಕೃಷಿ ಉತ್ಪನ್ನ ಮಾರ್ಕೆಟ್‌ನ ಅಧ್ಯಕ್ಷ ಎಂ.ಕೆಂಪರಾಜು, ಮುಖಂಡರಾದ ಹುಸ್ಕೂರು ಮದ್ದೂರಪ್ಪ, ಸ್ವಾತೇಗೌಡ, ಮುರುಗೇಶ್, ಶಿವರಾಜ್, ಸಂಪಂಗಿರಾಮಯ್ಯ, ಅಂಬರೀಷ್, ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT