ಸೋಮವಾರ, ಸೆಪ್ಟೆಂಬರ್ 20, 2021
21 °C

ಗತವೈಭವ ಮರಳಿ ಪಡೆದ ಅಮಾನಿ ಕೆರೆ

ವಡ್ಡನಹಳ್ಳಿ ಭೋಜ್ಯಾನಾಯ್ಕ್‌ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ನಂದಿಬೆಟ್ಟದ ದಾರಿಯಲ್ಲಿ ಕಾಣುತ್ತಿದ್ದ ಅಮಾನಿ ಕೆರೆ ತನ್ನ ಗತವೈಭವವನ್ನು ಮತ್ತೆ ಪಡೆದಿದೆ.

ಕೆರೆಯಲ್ಲಿ ಶೇಕಡ 80ರಷ್ಟು ಭಾಗ ಹೂಳು ತುಂಬಿತ್ತು. ಗಿಡಗಂಟಿ ಆವರಿಸಿ ಜಾಲಿ ಕೊಂಪೆಯಾಗಿ ಮಾರ್ಪಟ್ಟು ಒಳಗೆ ಕಾಲಿಡದ ಸ್ಥಿತಿಯಲ್ಲಿ ಕೆರೆ ಇತ್ತು. ಕೆರೆ ಏರಿ ಹೊಲದ ಬದುವಿನಂತೆ ಕಾಣುತ್ತಿತ್ತು. 

ಸ್ಫೂರ್ತಿಯಾದ ಯಶೋಗಾಥೆ

ದೇವನಹಳ್ಳಿ ಚಿಕ್ಕ ಸಿಹಿನೀರಿನ ಕೆರೆ ಸ್ಥಳೀಯರ ನೆರವಿನೊಂದಿಗೆ ಅಭಿವೃದ್ಧಿಯಾದ ಸುದ್ದಿ ಓದಿದ ಗ್ರಾಮಸ್ಥರು ಈ ಕೆರೆಯನ್ನೂ ಅಭಿವೃದ್ಧಿಗೊಳಿಸಲು ಮುಂದಾದರು.

ಒಂದು ದಿನದ ನಂತರ ಸ್ಥಳೀಯ ಮುಖಂಡರಾದ ಮುನೇಗೌಡ, ಮುನಿಕೃಷ್ಣಪ್ಪ, ಭೈರೇಗೌಡ, ರಾಜೇಂದ್ರ, ಮಂಜುನಾಥ್‌, ಜಯರಾಮಯ್ಯ ಒಂದೆಡೆ ಸೇರಿ ಜಿಲ್ಲಾಧಿಕಾರಿ ಕರೀಗೌಡರನ್ನು ಭೇಟಿ ಮಾಡಿ ಕೆರೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದರು.

2018 ನ.1ರ ಮಧ್ಯಾಹ್ನ ಕೆರೆ ಪರಿಶೀಲಿಸಿದ ಜಿಲ್ಲಾಧಿಕಾರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮಸ್ಥರ ಸಭೆ ಕರೆದು ಚಚಿರ್ಸಿದರು. ನ.3ರಂದು ಸಂಜೆ 7 ಗಂಟೆಗೆ ಆಗಮಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ದೇಣಿಗೆ ಸಂಗ್ರಹಿಸಿ ದೇಣಿಗೆ ನೀಡುವವರ ಪಟ್ಟಿ ಮಾಡಿಕೊಂಡರು. ಆರಂಭದಲ್ಲೇ ₹ 4.3 ಲಕ್ಷ ದೇಣಿಗೆ ಸಂಗ್ರಹಗೊಂಡಿತು. ಕಾಮಗಾರಿ ನಡೆಸಲು ಆತ್ಮಸ್ಥೈರ್ಯ ಸಿಕ್ಕಿಂದಂತಾಯಿತು ಎಂದು ಕಾಮಗಾರಿ ನಡೆಸುವ ಸಂಬಂಧ ನಡೆದ ಸಭೆ, ಚರ್ಚೆ, ದೇಣಿಗೆ ಸಂಗ್ರಹದ ಬಗ್ಗೆ ಗ್ರಾಮಸ್ಥರು  ವಿವರಿಸಿದರು.

ಪ್ರಸ್ತುತ ಕೆರೆಯಲ್ಲಿ 6 ರಿಂದ 8 ಅಡಿ ಫಲವತ್ತಾದ ಮೆಕ್ಕಲು ಮಣ್ಣು ಹೊರತೆಗೆಯಲಾಗುತ್ತಿದೆ. ಆರಂಭದಲ್ಲಿ 8 ರಿಂದ 10 ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಪ್ರಸ್ತುತ ನಾಲ್ಕು ಕಾರ್ಯನಿರ್ವಹಿಸುತ್ತಿವೆ. ಒಂದು ದಿನಕ್ಕೆ ಸರಾಸರಿ 600 ಲೀಟರ್‌ ಡೀಸೆಲ್‌ ಖರ್ಚಾಗುತ್ತಿದೆ. ಟಿಪ್ಪರ್‌, ಲಾರಿ ಟ್ರ್ಯಾಕ್ಟರ್‌ಗಳ ಮಾಲೀಕರು ಮತ್ತು ಕೆರೆ ಸುತ್ತಮುತ್ತ ಇರುವ ಜಮೀನ್ದಾರರು ಸ್ವಯಂ ಪ್ರೇರಿತವಾಗಿ ಮಣ್ಣು ಸಾಗಾಟ ಮಾಡಿಕೊಳ್ಳುತ್ತಿದ್ದಾರೆ. ಇದು ನಮಗೆ ಆರ್ಥಿಕ ಉಳಿತಾಯಕ್ಕೆ ಅನುಕೂಲವಾಗಿದೆ ಎಂದು ಕಾಮಗಾರಿಯ ಮಾಹಿತಿ ಹಂಚಿಕೊಂಡರು.

‘ಕೆರೆಯ ವಿಸ್ತೀರ್ಣ ಒಟ್ಟು 49 ಎಕರೆ ವ್ಯಾಪ್ತಿಯಲ್ಲಿ ಶೇ 80ರಷ್ಟು ಕಾಮಗಾರಿ ಮುಗಿದಿದೆ. ಒಟ್ಟಾರೆ ವೆಚ್ಚ 50 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಸ್ತುತ 40 ಲಕ್ಷ ಖರ್ಚಾಗಿದೆ. ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನೀರೀಕ್ಷೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಮುಖಂಡರು ಪಕ್ಷಾತೀತವಾಗಿ ಸ್ಪಂದಿಸಿದಕ್ಕೆ ಇಷ್ಟೊಂದು ಅಭಿವೃದ್ಧಿ ಕಾಮಗಾರಿ ಆಗಿದೆ. ಈ ಕೆರೆಯಿಂದ ಎರಡು ಲಾಭವಿದೆ. ಮೊದಲನೆಯದಾಗಿ ಜಲ ಮೂಲ ಉಳಿಸುವ ಪ್ರಯತ್ನ, ಮತ್ತೊಂದೆಡೆ ರೈತರಿಗೆ ಫಲವತ್ತಾದ ಮಣ್ಣು ಸಿಗುತ್ತದೆ. ಆರೇಳು ವರ್ಷ ಕಳೆದರೂ ಜಮೀನುಗಳಿಗೆ ಯಾವುದೇ ಗೊಬ್ಬರದ ಅವಶ್ಯಕತೆ ಇಲ್ಲ. ನಮ್ಮ ಜಿಲ್ಲಾಧಿಕಾರಿಯನ್ನು ಕರೀಗೌಡ ಎನ್ನುವ ಬದಲು ಕೆರೆಗೌಡ ಎನ್ನಬೇಕು’ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು ಎ ದೇವರಾಜ್‌.
ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ‘ಸ್ಥಳೀಯವಾಗಿ ಕೆರೆ ಅಭಿವೃದ್ಧಿಪಡಿಸಲು ಮುಂದು ಬಂದರೆ ಅವರ ಜತೆಗೆ ನಾನು ಇರುತ್ತೇನೆ ಕನಿಷ್ಠ 50 ರಿಂದ 60 ಕೆರೆ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂಬ ಚಿಂತನೆ ಇದೆ. ಪ್ರಸ್ತುತ ದೇವನಹಳ್ಳಿ ತಾಲ್ಲೂಕಿನ ಕಾಮೇನಹಳ್ಳಿ ಕೆರೆ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು