ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿರುವ ಅಂಬೇಡ್ಕರ್‌ ನಿಗಮ: ಅಧಿಕಾರಿ ವಿರುದ್ಧ ಕ್ರಮ

Last Updated 24 ಜೂನ್ 2022, 3:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ‌ಕ್ಕೆ ಕಚೇರಿ ನೀಡಿದರೂ ಒಂದೇ ಒಂದು ದಿನ ಬಾಗಿಲು ತೆಗೆದಿಲ್ಲ. ಜನರಿಗೆ ಸ್ಪಂದಿಸುವಲ್ಲಿ ನಿಗಮದ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ‌ ಅಧಿಕಾರಿ ಶ್ರೀನಾಥಗೌಡ ತರಾಟೆಗೆ ತೆಗೆದುಕೊಂಡರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ‌ ನಡೆದ ಕೆಡಿಪಿ ಸಭೆಯಲ್ಲಿ ನಿಗಮದ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ಇಲ್ಲಿ ಜವಾಬ್ದಾರಿ ವಹಿಸಿಕೊಂಡು ನಾಲ್ಕು ತಿಂಗಳು ಕಳೆದಿದೆ. ನಿಗಮದ ಅಧಿಕಾರಿಯನ್ನು ಈವರೆಗೆ ಯಾವುದೇ ಸಭೆಗಳಲ್ಲೂ ನೋಡಲೇ ಇಲ್ಲ. ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಲ್ಲಿ‌ ನಿಗಮದ ಕುರಿತ ದೂರುಗಳೇ ಹೆಚ್ಚು ಕೇಳಿ ಬರುತ್ತಿವೆ. ಪರಿಶಿಷ್ಟ ಜಾತಿ, ಪಂಗಡದ ಜನರ ಕಲ್ಯಾಣಕ್ಕೆ ಸ್ಪಂದಿಸಬೇಕಾದ ನಿಗಮದ ಅಧಿಕಾರಿಗಳೇ ಬೇಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಿದರೆ ಸಹಿಸಲಾಗದು.‌ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆಗೆ ವರ್ಗಾವಣೆಮಾಡಿಸಿಕೊಂಡು ಹೋಗಿ. ನಿಗಮದ ಕಚೇರಿಗೆ ನಾಮಫಲಕ ಹಾಕಿಲ್ಲ. ಇಲ್ಲಿನ ಅಧಿಕಾರಿ ಯಾವಾಗ ಸಿಗುತ್ತಾರೆ ಎಂಬುದೇ‌ ಜನರಿಗೆ ತಿಳಿಯುತ್ತಿಲ್ಲ’ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮ‌ದ ಅಧಿಕಾರಿ ಪಲ್ಲವಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಂಬೇಡ್ಕರ್ ಅಭಿವೃದ್ಧಿ ನಿಗಮ‌ದ ಅಧಿಕಾರಿ ಪಲ್ಲವಿ ಅವರು, ‘ಎರಡು ತಾಲ್ಲೂಕಿನ‌ ಜವಾಬ್ದಾರಿ ಹಾಗೂ ಸ್ಥಳ ಪರಿಶೀಲನೆ‌ ಇರುವುದರಿಂದ ಕಚೇರಿಗೆ ನಿಯಮಿತವಾಗಿ ಬರಲಾಗುತ್ತಿಲ್ಲ. ಕೂಡಲೇ ಕಚೇರಿಗೆ ನಾಮಫಲಕ ಹಾಕಿಸಲಾಗುವುದು. ಜತೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಕಚೇರಿಯಲ್ಲಿ ಇರುತ್ತೇನೆ’ ಎಂದರು.

‘ಪ್ರತಿ‌ ಮನೆಗೆ ನಳ‌ ಸಂಪರ್ಕ ಕಲ್ಪಿಸಲು ಜಲಜೀವನ್‌ಮಿಷನ್ ನಡಿ ನೂರು ಕೋಟಿ ಹಣ ಮೀಸಲಿರಿಸಲಾಗಿದೆ. ಆದರೆ ಯೋಜನೆ ಕುರಿತು ಐದು ತಿಂಗಳಾದರೂ‌ ಕ್ರಿಯಾ ಯೋಜನೆ ರೂಪಿಸಿಲ್ಲ. ಈಗಾಗಲೇ ಅರ್ಧ ವರ್ಷ‌ ಮುಗಿಯುತ್ತಿದೆ. ಗುತ್ತಿಗೆ ಪಡೆದ ಏಜೆನ್ಸಿಯವರು ಡಿಪಿಆರ್ ತಿದ್ದುಪಡಿ ನೆಪ ಹೇಳಿ ಕಾಲ ತೆರಳುತ್ತಿದ್ದು, ಅಧಿಕಾರಿಗಳು‌ ಕೂಡ ಯೋಜ‌ನೆಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿರುವುದು ತರವಲ್ಲ’ ಎಂದರು.

ಸಭೆಗೆ ಗೈರಾಗಿದ್ದ ಸಹಕಾರ‌ ಉಪನಿಬಂಧಕರ‌ ಕಚೇರಿ ಅಧಿಕಾರಿಗೆ ನೋಟಿಸ್ ನೀಡುವಂತೆ ಸೂಚಿಸಲಾಯಿತು. ಮೀನುಗಾರಿಕೆ‌ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಇಲಾಖೆ ವತಿಯಿಂದ ಹಾಜರಾಗಿದ್ದ ಸಿಬ್ಬಂದಿಯೊಬ್ಬರು ಪ್ರಗತಿ ವಿವರಿಸಲು ತಡವರಿಸಿದರು. ಕೆರೆಗಳ‌ ಮಾಹಿತಿ, ಮೀನು ಸಾಕಾಣಿಕೆ‌ ಮಾಡಿರುವ ವಿವರವೂ ಸಮರ್ಪಕವಾಗಿರಲಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ‌ ಶ್ರೀನಾಥಗೌಡ, ಮೀನಿಗಾರಿಕೆ ಇಲಾಖೆ ಅತ್ಯಂತ ಅದ್ವಾನ ಹಿಡಿದಿದೆ.‌ ಕೆಲಸ ಮಿತಿ‌‌ ಕಡಿಮೆ‌ ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ‌ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಸಭೆಯಲ್ಲಿ‌ ಜಿಲ್ಲಾ ಪಂಚಾಯಿತಿ ‌ ಮುಖ್ಯ ಯೋಜನಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನರಸಿಂಹ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT