ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್| ಸರ್ಕಾರದ ಸಾಧನೆಯೇ ಬಿಜೆಪಿ ಶ್ರೀರಕ್ಷೆ: ಸಚಿವ ಆರ್‌.ಅಶೋಕ್

ಬನ್ನೇರುಘಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
Last Updated 6 ಮಾರ್ಚ್ 2023, 4:39 IST
ಅಕ್ಷರ ಗಾತ್ರ

ಆನೇಕಲ್ : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯನ್ನು ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಂದಾಯ ಸಚಿವ ಆರ್‌.ಅಶೋಕ್ ಚಾಲನೆ ನೀಡಿದರು.

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಡಲು ರಾಜ್ಯದಾದ್ಯಂತ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಸರ್ಕಾರದ ಸಾಧನೆಗಳನ್ನು ಜನರು ಮೆಚ್ಚಿದ್ದು ಜನರ ಮನಸ್ಸಿನಲ್ಲಿ ಬಿಜೆಪಿ ಪಕ್ಷವಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಡಬಲ್‌ ಎಂಜಿನ್‌ ಸರ್ಕಾರವನ್ನು ಮುನ್ನಡೆಸುವುದು ಖಚಿತ. ಹಾಗಾಗಿ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.

ರಾಜ್ಯಕ್ಕೆ ಬೇಕಾಗಿರುವುದು ಜನರ ಅಭಿವೃದ್ಧಿ ಬಯಸುವ ಮುಖ್ಯಮಂತ್ರಿ. ಲಾಟರಿ ಮೂಲಕ ಆಯ್ಕೆಯಾಗುವ ಮುಖ್ಯಮಂತ್ರಿಗಳ ಅವಶ್ಯಕತೆಯಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಹೋಟೆಲ್‌ಗಳಲ್ಲಿ ಆಡಳಿತ ನಡೆಸಿದ್ದರು ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನಲ್ಲಿದ್ದ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದರು. ಇದ್ದ ಅಧಿಕಾರವನ್ನು ನಡೆಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಯೋಗ್ಯತೆ ಇರಲಿಲ್ಲ. ಕೊಟ್ಟ ಕುದುರೆ ಏರಲಾಗದವರು ವೀರರು ಅಲ್ಲ, ಶೂರರು ಅಲ್ಲ. ಹಾಗಾಗಿ ಈ ಬಾರಿ ಜನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಿರಸ್ಕರಿಸಲಿದ್ದಾರೆ ಎಂದರು.

ತೋಟಗಾರಿಕೆ ಸಚಿವ ಮುನಿರತ್ನ ಮಾತನಾಡಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ರಸ್ತೆ, ಕುಡಿಯುವ ನೀರು ಸೇರಿದಂತೆ ಜನರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ನೀಡುವಲ್ಲಿ ಶಾಸಕ ಎಂ.ಕೃಷ್ಣಪ್ಪ ಅವರು ಯಶಸ್ವಿಯಾಗಿದ್ದಾರೆ ಎಂದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ನಗರಗಳ ಸೌಲಭ್ಯ ಕಲ್ಪಿಸಲಾಗಿದೆ. ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ. ಜನಸೇವೆ ಯೋಜನೆ ರೂಪಿಸಲಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡಲಾಗಿದೆ. ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದರು.

ಜಿಗಣಿಯಲ್ಲಿ ನಡೆದ ರೋಡ್‌ಷೋನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಪಾಲ್ಗೊಂಡಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಗೋಪಿನಾಥರೆಡ್ಡಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್‌ನಾರಾಯಣ್‌, ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್, ಮುಖಂಡರಾದ ಸಚ್ಚಿದಾನಂದ ಮೂರ್ತಿ, ಜಯರಾಮ್‌, ಸುದರ್ಶನ್‌, ಚುಂಚಘಟ್ಟ ಮಣಿ, ಕೊಪ್ಪ ಮುನಿರಾಜು, ಮೈಕೋ ನಾಗರಾಜು, ಜಿಗಣಿ ಪುನೀತ್‌, ಗಿರೀಶ್, ಪ್ರವೀಣ್‌, ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT