ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಚಂಪಕಧಾಮ ರಥೋತ್ಸವ

ಬನ್ನೇರುಘಟ್ಟ
Last Updated 14 ಮಾರ್ಚ್ 2023, 5:26 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲ ಗ್ರಾಮಗಳು, ಬೆಂಗಳೂರು, ಕನಕಪುರ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ವೈಭವದ ಉತ್ಸವಕ್ಕೆ ಸಾಕ್ಷಿಯಾದರು.

ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಗೆ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು.

ಮಧ್ಯಾಹ್ನ 12ರ ವೇಳೆಗೆ ದೇವಾಲಯದ ಪ್ರಧಾನ ಅರ್ಚಕರು ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕುರಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಗೋವಿಂದ ಗೋವಿಂದ ಎಂದು ಜಯಘೋಷ ಕೂಗಿದರು.

ರಥ ಸಾಗುತ್ತಿದ್ದಂತೆಯೇ ದವನ ಚುಚ್ಚಿದ ಬಾಳೆಹಣ್ಣು ಎಸೆದರು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಹರಿದು ಬಂದಿತ್ತು. ತೇರು ಚಂಪಕವಲ್ಲಿ ಮಾರಮ್ಮನ ದೇವಾಲಯದ ಮೂಲಕ ಸಾಗಿ ಬನ್ನೇರುಘಟ್ಟದ ಆಂಜನೇಯ ದೇವಾಲಯದವರೆಗೂ ಸಾಗಿತು.

ರಥೋತ್ಸವದ ಅಂಗವಾಗಿ ಗರಡವಾಹನೋತ್ಸವ, ಹನುಮಂತೋತ್ಸವ, ಸೂರ್ಯಮಂಡಲೋತ್ಸವ, ಶೇಷ ವಾಹನೋತ್ಸವ, ಮೋಹಿನಿ ತಿರುಕುಳೋತ್ಸವ, ವೈರಮುಡಿ ಉತ್ಸವ, ಗಜೇಂದ್ರ ಮೋಕ್ಷ, ಗರಡೋತ್ಸವ, ಉಂಜಲಿಸೇವೆ, ಧೂಳೋತ್ಸವ, ರಾಜಮುಡಿ ಉತ್ಸವಗಳು ನಡೆದವು.

ದಾರಿಯುದ್ದಕ್ಕೂ ಅರವಂಟಿಕೆಗಳು : ಬೇಸಿಗೆಯ ಕಾಲವಾಗಿದ್ದರಿಂದ ಜನರ ಬಿಸಿಲಿನ ಬೇಗೆ ತಣಿಸಲು ರಸ್ತೆಯುದ್ದಕ್ಕೂ ಅರವಂಟಿಕೆಗಳ ಸಾಲುಗಳು ಕಂಡುಬಂದವು. ನೀರು ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಭಕ್ತರಿಗೆ ವಿತರಿಸಲಾಯಿತು. ಬನ್ನೇರುಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಜಿಗಣಿ ರಸ್ತೆಯುದ್ದಕ್ಕೂ ಮಂಟಪ, ಜಂಗಲ್‌ಪಾಳ್ಯ, ಬೇಗಿಹಳ್ಳಿ, ಹರಪನಹಳ್ಳಿಗಳ ಬಳಿ ಎರಡು ಬದಿಗಳಲ್ಲಿಯೂ ಅರವಂಟಿಕೆ ಸ್ಥಾಪಿಸಲಾಗಿತ್ತು.

ಹಲವೆಡೆ ಅನ್ನದಾನದ ಛತ್ರಗಳನ್ನು ಎಲ್ಲೆಡೆ ತೆರೆಯಲಾಗಿತ್ತು. ಬೆಳಗಿನಿಂದ ಸಂಜೆಯವರೆಗೂ ನಿರಂತರ ಅನ್ನದಾಸೋಹ ವಿವಿಧೆಡೆ ಏರ್ಪಡಿಸಲಾಗಿತ್ತು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಜಯರಾಮ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ ಚೌಡಪ್ಪ, ಉಪಾಧ್ಯಕ್ಷ ಮಾದೇಶ್, ಮುಖಂಡರಾದ ಆರ್.ಕೆ.ರಮೇಶ್, ಅಚ್ಯುತರಾಜು, ನರೇಂದ್ರಬಾಬು, ಬಾಬುಸಿಂಗ್‌, ಚೇತನ್‌ಗೌಡ, ರವೀಶ್‌ಗೌಡ, ರಘು, ನಾಗಿರೆಡ್ಡಿ ಇದ್ದರು.

ಜಾತ್ರೆಯ ಆಕರ್ಷಣೆ: ಜಾತ್ರೆಯಲ್ಲಿ ನೂರಾರು ಮಂಗಳಮುಖಿಯರು ಜಾತ್ರೆಯಲ್ಲಿ ಭಾಗವಹಿಸಿದ್ದು, ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಜಾತ್ರೆಯ ಮತ್ತೊಂದು ವಿಶೇಷ. ಬೆಂಗಳೂರು, ಹೊಸೂರು ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಮಂದಿ ಮಂಗಳಮುಖಿಯರು ಆಗಮಿಸಿದ್ದರು.

ಮಂಗಳಮುಖಿಯರು ಬನ್ನೇರುಘಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ಚಂಡೆ, ತಮಟೆಯ ತಾಳಕ್ಕೆ ಕುಣಿಯುತ್ತಾ ಮೂರು ಕಿ.ಮೀ. ದೂರದ ಬೇಗಿಹಳ್ಳಿಯ ಬೇಗಳಮ್ಮ ದೇವಾಸ್ಥಾನಕ್ಕೆ ಗುಂಪುಗುಂಪಾಗಿ ತೆರಳುತ್ತಿದ್ದ ದೃಶ್ಯ ಕಂಡುಬಂದಿತು.

ಮಂಗಳಮುಖಿಯರ ಆರಾಧ್ಯದೈವ ಬೇಗಳಮ್ಮನಿಗೆ ಪೂಜೆ ಸಲ್ಲಿಸಲು ವಿಶೇಷವಾಗಿ ಅಲಂಕಾರ ಮಾಡಿಕೊಂಡು ಭಕ್ತಿಯಿಂದ ಭಾವುಕರಾಗಿ ಕುಣಿಯುತ್ತಾ ಸಾಗಿ ಬರುತ್ತಿದ್ದ ದೃಶ್ಯ ರಸ್ತೆಯುದ್ದಕ್ಕೂ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT