ಆನೇಕಲ್: ಕೇಂದ್ರದ ಬಿಜೆಪಿ ಸರ್ಕಾರ ಜನರ ಉದ್ಯೋಗ ಕಸಿದುಕೊಂಡಿದೆ. ಉದ್ಯೋಗ ಸೃಷ್ಠಿಯಲ್ಲಿ ವಿಫಲವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ತಾಲ್ಲೂಕಿನ ಇಂಡ್ಲವಾಡಿ ಗೇಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಅಸ್ಮಿತೆಯಾಗಿದ್ದ ಸಿಂಡಿಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಮೈಸೂರು ಸೇರಿದಂತೆ ವಿವಿಧ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಹೆಸರಿಲ್ಲದಂತೆ ಮಾಡಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಬ್ಯಾಂಕ್ ಖಾತೆ ತೆರೆಯಿರಿ ಕಪ್ಪು ಹಣ ತಂದು ಪ್ರತಿ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಪ್ರಚಾರ ಮಾಡಿದ್ದರು. ಆದರೆ ಇದುವರೆಗೆ ಜನರ ಖಾತೆಗೆ ಯಾವುದೇ ಹಣ ಬಂದಿಲ್ಲ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಬಲ ನೀಡಲಾಗಿದೆ ಎಂದು ಹೇಳಿದರು.
‘ಆನೇಕಲ್‌ನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಐದು ಸಾವಿರ ಬಡ ಕುಟುಂಬಗಳಿಗೆ ಮನೆ ಹಕ್ಕುಪತ್ರ ನೀಡಲಾಗಿದೆ. ರಾಜ್ಯದ ಪರ ದನಿ ಎತ್ತಿದ್ದರೆ ದೇಶದ್ರೋಹಿ ಪಟ್ಟ ಕೊಟ್ಟಿದ್ದಾರೆ. ಆದರೆ ರಾಜ್ಯದ ಜನತೆಯ ಹಿತಾಸಕ್ತಿಗಾಗಿ ದೇಶದ್ರೋಹಿಯಾಗಲು ಸಿದ್ದನಿದ್ದೇನೆ’ ಎಂದರು.
ಆನೇಕಲ್ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕಾವೇರಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹೆಬ್ಬಗೋಡಿ, ಬೊಮ್ಮಸಂದ್ರ, ಜಿಗಣಿ ಹೋಬಳಿಯ ಹಾರಗದ್ದೆಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಶೀಘ್ರದಲ್ಲಿ ಆನೇಕಲ್ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕಾವೇರಿ ನೀರು ಪೂರೈಸಲಾಗುವುದು ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಕಾಂಗ್ರೆಸ್‌ನ ಕಾರ್ಯಕರ್ತರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕು. ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಮುಂದೆ ಕೈಗೊಳ್ಳುವ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಆನೇಕಲ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಗುಡ್ಡಹಟ್ಟಿ ರಘುಪತಿರೆಡ್ಡಿ, ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ, ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ್, ಮುಖಂಡರಾದ ಅಚ್ಯುತರಾಜು, ಬಿ.ಪಿ.ರಮೇಶ್, ಗೋಪಾಲಪ್ಪ, ಪಾರ್ಥಸಾರಥಿ, ಗೌರೀಶ್, ರಾಜಪ್ಪ, ಯಲ್ಲಪ್ಪ, ಬಳ್ಳೂರು ನಾರಾಯಣಸ್ವಾಮಿ, ರಾಜೇಂದ್ರ ಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.