ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಪುರಸಭೆ ಸದಸ್ಯರಿಗೆ ₹10 ಲಕ್ಷ ಆಮಿಷ ಒಡ್ಡಿದ್ದ ಬಿಜೆಪಿ: ಪದ್ಮನಾಭ ಆರೋಪ

ಪುರಸಭೆ ಸದಸ್ಯ ಎನ್‌.ಎಸ್‌.ಪದ್ಮನಾಭ ಆರೋಪ
Published 4 ಸೆಪ್ಟೆಂಬರ್ 2024, 15:34 IST
Last Updated 4 ಸೆಪ್ಟೆಂಬರ್ 2024, 15:34 IST
ಅಕ್ಷರ ಗಾತ್ರ

ಆನೇಕಲ್ : ಈಚೆಗೆ ನಡೆದ ಆನೇಕಲ್‌ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ಬಿಜೆಪಿ ₹10 ಲಕ್ಷ‌ ಆಮಿಷ ಒಡ್ಡಿತು ಎಂದು  ಪುರಸಭೆ ಸದಸ್ಯ ಎನ್‌.ಎಸ್.ಪದ್ಮನಾಭ ತಿಳಿಸಿದರು.

ಕಾಂಗ್ರೆಸ್‌ ಪುರಸಭೆ ಸದಸ್ಯರಾದ ಉಷಾ ಮನೋಹರ್‌, ಮುನಾವರ್‌, ಭಾರತಿ ಸೇರಿದಂತೆ ಹಲವು ಮಂದಿ ಸದಸ್ಯರಿಗೆ ಬಿಜೆಪಿ ₹10 ಲಕ್ಷ ಹಣದ ಆಫರ್‌ ನೀಡಿ ಚುನಾವಣೆಯಲ್ಲಿ ಗೈರಾಗಲು ತಿಳಿಸಿತ್ತು. ಈ ಬಗ್ಗೆ ದಾಖಲೆಗಳು ಸಹ ಇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆದರೆ ಕಾಂಗ್ರೆಸ್‌ ಪಕ್ಷ ಯಾರಿಗೂ ಯಾವುದೇ ಆಮಿಷ ಒಡ್ಡಿಲ್ಲ. ಕಾಂಗ್ರೆಸ್‌ ಸದಸ್ಯರೊಬ್ಬರಿಗೆ ಗೋವಾ ಪ್ರವಾಸ ಮಾಡಿಸಿರುವ ಬಗ್ಗೆ ಮಾಹಿತಿಗಳಿವೆ. ಆದರೆ ಬಿಜೆಪಿ ಜಿಲ್ಲಾ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಮತ್ತು ಅಸಮರ್ಪಕ ಮಾಹಿತಿಗಳನ್ನು ತಿಳಿಸಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ಆನೇಕಲ್‌ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದರೂ ಬಿಜೆಪಿ ಕಾಂಗ್ರೆಸ್‌ನ ಸದಸ್ಯರನ್ನು ಹೈಜಾಕ್‌ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಪ್ರಯತ್ನಿಸಿತು. ಆದರೆ ಪ್ರಯತ್ನ ವಿಫಲವಾಗಿದೆ. ಇಂತಹ ಪ್ರಯತ್ನಗಳಿಗೆ ಬೆಂಬಲ ದೊರೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವ ಮೂಲಕ ಸಂದೇಶ ನೀಡಿದೆ ಎಂದರು.

ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷ 14 ಮತ್ತು ಬಿಜೆಪಿ 12 ಸದಸ್ಯ ಬಲ ಹೊಂದಿತ್ತು. ಬಹುಮತವಿಲ್ಲದಿದ್ದರೂ ಆಪರೇಷನ್‌ ಕಮಲ ನಡೆಸಲು ಬಿಜೆಪಿ ಪ್ರಯತ್ನ ಮಾಡಿತು. ಸಿದ್ಧಾಂತ ಬಗ್ಗೆ ಮಾತನಾಡುವ ಬಿಜೆಪಿ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಿತು. ಬಿಜೆಪಿಯರ ನಡೆಗೆ ಕಾಂಗ್ರೆಸ್‌ ಪಕ್ಷವು ಪ್ರತಿನಡೆಯ ಮೂಲಕ ಬಿಸಿ ಮುಟ್ಟಿಸಿದೆ ಎಂದು ತಿಳಿಸಿದರು.

ಆನೇಕಲ್‌ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಿಜೆಪಿಯು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದೆ. ಆದರೆ ಆನೇಕಲ್‌ನ ಅಭಿವೃದ್ಧಿಯಲ್ಲಿ ಶಾಸಕ ಬಿ.ಶಿವಣ್ಣ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ಪಾತ್ರ ಪ್ರಮುಖವಾಗಿದೆ. ಆನೇಕಲ್‌ಗೆ ಕಾವೇರಿ ನೀರು, ಏತ ನೀರಾವರಿ, ಅಂಬೇಡ್ಕರ್‌ ಭವನದ ನಿರ್ಮಾಣ ಪ್ರಗತಿಯಲ್ಲಿದೆ. ಥಳೀ ರಸ್ತೆ ಅಗಲೀಕರಣ, ಮೆಟ್ರೋ ಸೇರಿದಂತೆ ವಿವಿಧ ಅಭಿವೃದ್ಧಿಗೆ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ ಎಂದರು.

ಪುರಸಭಾ ಸದಸ್ಯರಾದ ಮುನಾವರ್, ರಾಜೇಂದ್ರ ಪ್ರಸಾದ್‌, ಮಹಾಂತೇಶ್‌, ಮುಖಂಡ ದಿನೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT