ಆನೇಕಲ್: ಪಟ್ಟಣದಲ್ಲಿ ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಕಟ್ಟಡವನ್ನು ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಸಂಘವು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ಲಾಭದಾಯಕವಾಗಿ ನಡೆಯುತ್ತಿದೆ. ಸುಮಾರು ₹32 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಸಂಘದ ಹಣ ₹13.68ಲಕ್ಷ ಲಕ್ಷವಿತ್ತು. ಉಳಿದ ಹಣವನ್ನು ನಿರ್ದೇಶಕರು ಒಗ್ಗೂಡಿಸಿ ಸುಮಾರು ₹9ಲಕ್ಷ ಹಣವನ್ನು ಕಟ್ಟಡ ನಿರ್ಮಾಣಕ್ಕೆ ನೀಡಿದ್ದಾರೆ. ಶಾಸಕ ಬಿ.ಶಿವಣ್ಣ ಅವರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹5ಲಕ್ಷ ಹಣವನ್ನು ಕಟ್ಟಡ ನಿರ್ಮಾಣಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಸಂಘವು ಪ್ರತಿ ತಿಂಗಳು ₹1.63 ಲಕ್ಷ ಹಣವನ್ನು ಬಾಡಿಗೆಯಿಂದ ಪಡೆಯುತ್ತಿದೆ. ಚೀಲಗಳ ಮಾರಾಟದಿಂದ ₹60ಸಾವಿರ ಬರುತ್ತಿದೆ. ಸಂಘವನ್ನು ರೈತಸ್ನೇಹಿಯಾಗಿ ಮಾಡಲು ರೈತಸ್ನೇಹಿ ಕೇಂದ್ರವನ್ನು ಸ್ವಂತ ಕಟ್ಟಡದಲ್ಲಿ ಆರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ಸಂಘದಲ್ಲಿ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಚಿನ್ನಾಭರಣ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮೂಲಕ ರೈತರಿಗೆ ಅವಶ್ಯಕವಿರುವ ಗೊಬ್ಬರ, ಬೀಜಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಚಿಂತನೆ ಮಾಡಲಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ನಟರಾಜ್, ಸಹಕಾರ ಸಂಘಗಳು ರಾಜಕೀಯ ರಹಿತವಾಗಿ ಕೆಲಸ ಮಾಡುವ ಉದ್ದೇಶದಿಂದಾಗಿ ಸದಸ್ಯರು ಶ್ರಮಿಸುತ್ತಿದ್ದರು. ರೈತರಿಗೆ ದೊರೆಯಬೇಕಾದ ಸೌಲಭ್ಯಗಳು ನಿಗದಿತ ಅವಧಿಯಲ್ಲಿ ದೊರೆಯುವಂತೆ ಮಾಡಲು ಸಂಘವು ಶ್ರಮಿಸಬೇಕಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ರಾಮಕೃಷ್ಣ, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಶೇಖರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಪುರಸಭೆ ಸದಸ್ಯರಾದ ಎನ್.ಎಸ್.ಪದ್ಮನಾಭ, ರಾಜೇಂದ್ರಪ್ರಸಾದ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಧು.ಎಸ್.ಮೂರ್ತಿ, ಸಂಘದ ನಿರ್ದೇಶಕರಾದ ಎಂ.ಬಾಬು, ಮುರಳಿಕೃಷ್ಣ, ಮುನಿಚೌಡಪ್ಪ, ಮಂಜುನಾಥ್, ತಿಲಕ್, ನೇತ್ರಾ ಧನಂಜಯ್, ವಿನೀತ್, ಮಂಜುನಾಥರೆಡ್ಡಿ, ಗಿರಿಜಮ್ಮ, ಶಿವಾನಂದ್, ಹರೀಶ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.