ಆನೇಕಲ್: ಪಟ್ಟಣದ ಎಎಸ್‌ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ತಾಲ್ಲೂಕಿನ 22ಕ್ಲಸ್ಟರ್‌ಗಳಿಂದ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಚಿತ್ರಕಲೆ, ರಂಗೋಲಿ, ಮಿಮಿಕ್ರಿ, ಜಾನಪದ ನೃತ್ಯ, ಭರತನಾಟ್ಯ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಗ್ರಾಮೀಣ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಿ ಕಣ್ಮನ ಸೆಳೆದರು.
ಪಂಜುರ್ಲಿ, ಲಕ್ಷ್ಮೀ, ಸರಸ್ವತಿ, ವೆಂಕಟೇಶ್ವರ ವೇಷ ಸೇರಿದಂತೆ ವಿದ್ಯಾರ್ಥಿಗಳ ಛದ್ಮವೇಷ ಕಣ್ಮನ ಸೆಳೆದವು. ಭರತನಾಟ್ಯ ಸೇರಿದಂತೆ ವಿವಿಧ ಜಾನಪದ ಪ್ರಕಾರಗಳನ್ನು ಪ್ರದರ್ಶಿಸಿದರು.
ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್ ಮಾತನಾಡಿ, ಮಕ್ಕಳನ್ನು ಒಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಬರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಆನೇಕಲ್ ತಾಲ್ಲೂಕಿನ ವಿದ್ಯಾರ್ಥಿಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಪ್ರಶಸ್ತಿ ಪಡೆಯುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್ ಮಾತನಾಡಿ, ತೀರ್ಪುಗಾರರು ಪೂರ್ವಾಗ್ರಹಗಳಿಗೆ ಒಳಗಾಗದೇ ಪ್ರತಿಭೆ ಗುರುತಿಸಿ ತೀರ್ಪು ನೀಡಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಭುವನಾ ದಿನೇಶ್, ಸದಸ್ಯ ಸುರೇಶ್ ಬಾಬು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ಬಿಆರ್‌ಪಿ ಭಾಸ್ಕರ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ನರೇಂದ್ರಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಕಾರ್ಯದರ್ಶಿ ಮಂಜುನಾಥ್, ಶಿಕ್ಷಣ ಸಂಯೋಜಕರಾದ ನವೀನ್, ದತ್ತಗುರು ಹೆಗಡೆ, ವಾಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ರಾಜಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.