ಆನೇಕಲ್ : ಪಟ್ಟಣದ ಗುರುಭವನದಲ್ಲಿ ಸನ್‌ಸೇರಾ ಪ್ರತಿಷ್ಠಾನದಿಂದ ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿವಿಧ ಶಾಲೆಗಳ 287 ವಿದ್ಯಾರ್ಥಿಗಳಿಗೆ ₹44ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸನ್‌ಸೇರಾ ಪ್ರತಿಷ್ಠಾನದ ಮುಖ್ಯಸ್ಥ ಎಫ್.ಆರ್.ಸಿಂಘ್ವಿ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಬೇಕೆಂಬುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ವಿವಿಧ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಶಾಲೆಗಳಲ್ಲಿ 37 ಮಂದಿ ಶಿಕ್ಷಕರನ್ನು ನೇಮಕ ಮಾಡಿ ಸರ್ಕಾರಿ ಶಾಲೆಯಲ್ಲಿ ಪಾಠಗಳು ಸುಗಮವಾಗಿ ನಡೆಯುವಂತೆ ಮಾಡಲಾಗಿದೆ ಎಂದರು.
ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಹಾಗಾಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಸನ್‌ಸೇರಾ ಪ್ರತಿಷ್ಠಾನದಿಂದ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸಿದ 287 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಮಾತನಾಡಿ, ತಾಲ್ಲೂಕಿನ 15 ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ವಹಿಸಿದೆ. ಗ್ರಾಮೀಣ ಶಾಲೆಗಳ ಅಭಿವದ್ಧಿಗೆ ಸನ್‌ಸೇರಾ ಕಂಪನಿಯು ಹೆಚ್ಚಿನ ನೆರವು ನೀಡಿದೆ ಎಂದರು.
ರೋಟರಿ ಮಿಡ್‌ಟೌನ್‌ನ ಅಧ್ಯಕ್ಷ ಪಳನಿ ಲೋಕನಾಥನ್, ಓಬಿಎಲ್‌ಎಫ್‌ನ ಸಿಇಓ ಅನಿಷ್, ಸನ್‌ಸೇರಾ ಕಂಪನಿಯ ಉಪಾಧ್ಯಕ್ಷ ಸುರೇಶ್, ರೋಟರಿ ಸಂಸ್ಥೆಯ ಜಯರಾಮ್, ಸನ್‌ಸೇರಾ ಪ್ರತಿಷ್ಠಾನದ ಗುರುದತ್ತ, ಈರಪ್ಪ ಇದ್ದರು.