ವೈಭವದ ಆನೇಕಲ್ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ

ಮಂಗಳವಾರ, ಏಪ್ರಿಲ್ 23, 2019
31 °C

ವೈಭವದ ಆನೇಕಲ್ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ

Published:
Updated:
Prajavani

ಆನೇಕಲ್: ಪಟ್ಟಣದ ಅಧಿದೈವ ಶ್ರೀತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಂಭ್ರಮದಿಂದ ನೆರವೇರಿತು. ಬಿಸಿಲಿನ ಬೇಗೆಯ ನಡುವೆಯೂ ಸಹಸ್ರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿ ವೈಭವವನ್ನು ಕಣ್ತುಂಬಿಕೊಂಡರು.

ಆನೇಕಲ್‌ನ ಸಹದೇವಪುರ ಕ್ಷೇತ್ರದಲ್ಲಿ ಉದ್ಭವ ಮೂರ್ತಿಯಾಗಿ ನೆಲೆಸಿರುವ ಶ್ರೀತಿಮ್ಮರಾಯಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 1 ಗಂಟೆಗೆ ಶುಭ ಕಟಕ ಲಗ್ನದಲ್ಲಿ ರಥದಲ್ಲಿ ಕುಳ್ಳಿರಿಸಲಾಯಿತು. ಪ್ರಧಾನ ಅರ್ಚಕ ರಾಮಚಂದ್ರ ಭಟ್ಟರು ಸಾಂಪ್ರದಾಯಿಕ ಪೂಜೆ ನೆರವೇರಿಸಿ ಕಲ್ಲುಗಾಲಿಗಳ ಪಾರಂಪರಿಕ ರಥಕ್ಕೆ ಪೂಜೆ ಸಲ್ಲಿಸಿದರು.

ದೇವರ ಉತ್ಸವ ಮೂರ್ತಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಅಪಾರ ಜನಸ್ತೋಮ ಗೋವಿಂದ ಗೋವಿಂದ ಎಂದು ಜಯಘೋಷ ಮಾಡಿದರು. ಭಕ್ತರು ಕಬ್ಬಿಣದ ಸರಪಳಿ ಹಾಗೂ ಹಗ್ಗಗಳಿಂದ ರಥವನ್ನು ಎಳೆದು ದೇವಾಲಯದ ಮುಂಭಾಗಕ್ಕೆ ತಂದರು. ದೇವಾಲಯದ ಮುಂಭಾಗಕ್ಕೆ ಬರುತ್ತಿದ್ದಂತೆ ಭಕ್ತರು ಧವನ ಚುಚ್ಚಿದ ಬಾಳೆಹಣ್ಣನ್ನು ತೇರಿಗೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಹಲಗೆ ಉತ್ಸವ, ಗರುಡೋತ್ಸವ, ಕಲ್ಯಾಣೋತ್ಸವ, ಸೂರ್ಯಮಂಡಲೋತ್ಸವ, ಶೇಷ ವಾಹನೋತ್ಸವ ಸೇರಿದಂತೆ ವಿವಿಧ ಉತ್ಸವಗಳು ನಡೆದವು.

ಆನೇಕಲ್ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ತಮಿಳುನಾಡಿನ ಹೊಸೂರು, ಗುಮ್ಮಳಾಪುರ, ಥಳಿ ಭಾಗಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು. ಭಕ್ತರಿಗಾಗಿ ಅರವಂಟಿಕೆಗಳನ್ನು ಸ್ಥಾಪಿಸಿ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಹಂಚಲಾಗುತ್ತಿತ್ತು. ಕೆಲವವೆಡೆ ದಾಸೋಹ ಕೇಂದ್ರಗಳನ್ನು ಸ್ಥಾಪಿಸಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಶುಕ್ರವಾರ ಸಂಜೆ ಧೂಳೋತ್ಸವ, ತೆಪ್ಪೋತ್ಸವ, ಉಂಜಲ ಸೇವೆ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಾಲಯದ ಇತಿಹಾಸ: ಆನೇಕಲ್‌ನ ಪಾಳೆಗಾರರಾಗಿದ್ದ ತಿಮ್ಮೇಗೌಡರು ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ಇವರ ಗೋವುಗಳ ಹಿಂಡನ್ನು ಮೇಯಿಸಲು ಗೋಪಾಲಕರು ಸಹದೇವಪುರ ಎಂಬ ಅರಣ್ಯ ಪ್ರದೇಶಕ್ಕೆ ತೆರಳುತ್ತಿದ್ದರು. ಮೇಯಲು ಹೋಗುತ್ತಿದ್ದ ಹಿಂಡಿನ ಹಸುವೊಂದು ಸಂಜೆ ಕರುವಿಗೆ ಹಾಲು ಕೊಡದೇ ಇದುದ್ದನ್ನು ಗಮನಿಸಿದ ತಿಮ್ಮೇಗೌಡರು ಗೋಪಾಲಕನನ್ನು ಅನುಮಾನಿಸಿ ಗೋಪಾಲಕನಿಗೆ ತಿಳಿಯದಂತೆ ಹಸುವನ್ನು ಹಿಂಬಾಲಿಸಿದರು. ಹಸು ಕಾಡಿನಲ್ಲಿ ಹುತ್ತವೊಂದರ ಬಳಿ ಹಾಲು ಸುರಿಸುತ್ತಿದ್ದನ್ನು ಕಂಡು ಕುತೂಹಲಗೊಂಡರು.

ರಾತ್ರಿ ಶ್ರೀನಿವಾಸ ದೇವರು ಕನಸಿನಲ್ಲಿ ಬಂದು ತಾನು ಹುತ್ತದಲ್ಲಿ ನೆಲೆಸಿದ್ದೇನೆ. ಇಲ್ಲಿಯೇ ಮಂದಿರ ನಿರ್ಮಿಸಿ ಪೂಜೆಗೆ ಏರ್ಪಾಡು ಮಾಡುವಂತೆ ದೇವರು ತಿಳಿಸಿತು. ಹುತ್ತದ ಬಳಿ ನೋಡಿದಾಗ ಶಿಲೆಯೊಂದು ಕಾಣಿಸಿತು. ಸಂತಸಗೊಂಡ ಪಾಳೆಗಾರರು ಸಣ್ಣ ಗುಡಿಯನ್ನು ಇಂದಿನ ದೇವಾಲಯದ ಸ್ಥಳದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಶಿಥಿಲಗೊಂಡಿದ್ದ ದೇವಾಲಯವನ್ನು 1913ರಲ್ಲಿ ಅಂದಿನ ತಹಶೀಲ್ದಾರ್ ಆಗಿದ್ದ ಗೋಪಾಲರಾಜ ಅರಸ್ ಜೀರ್ಣೋದ್ಧಾರಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !