ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಯಬೇಕಾದ ವಿಶೇಷ

Last Updated 19 ಜೂನ್ 2018, 13:06 IST
ಅಕ್ಷರ ಗಾತ್ರ

ಜೀವ ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳನೆರೆದುಮಿಹುದಂತೆ ||
ಭಾವಕೊಳಪಡದಂತೆ ಅಳತೆಗಳವಡದಂತೆ |
ವಿಶೇಷಕೆ ಮಣಿಯೋ – ಮಂಕುತಿಮ್ಮ ||
(ಜೀವ = ಚೈತನ್ಯವಿರುವ, ಜಡರೂಪ = ಚೈತನ್ಯರಹಿತವಾದ, ಒಳನೆರೆದು = ಒಳಗೆ ತುಂಬಿಕೊಂಡು, ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ)

ಪ್ರಪಂಚವಿರುವುದು ಎರಡೇ ರೂಪದಲ್ಲಿ: ಚೈತನ್ಯವಿರುವ ವಸ್ತುಗಳು ಹಾಗೂ ಚೈತನ್ಯರಹಿತವಾದ ಜಡವಸ್ತುಗಳು. ಅದು ಯಾವುದೋ ಶಕ್ತಿ ಈ ಜೀವ ಹಾಗೂ ಜಡವಸ್ತುಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆಯಂತೆ. ಅದು ಭಾವಕ್ಕೆ ನಿಲುಕಲಾರದ್ದು, ಅಳತೆಗೆ ದಕ್ಕಲಾರದ್ದು. ಇಂಥ ಅದ್ಭುತವಾದ ವಿಶೇಷಕ್ಕೆ ನಮಿಸು, ಮಣಿ ಎನ್ನುತ್ತಾರೆ ಡಿ.ವಿ.ಜಿ.

ನಮ್ಮ ಭಾರತೀಯ ದೃಷ್ಟಿ ಅನನ್ಯವಾದದ್ದು. ಪ್ರಪಂಚದ ಸರ್ವ ವಸ್ತುಗಳಲ್ಲಿ ಅದು ತೋರಿಕೆಗೆ ಜಡವೇ ಆಗಿರಬಹುದು ಅಥವಾ ಚೈತನ್ಯವನ್ನು ಹೊಂದಿದ್ದಾಗಿರಬಹುದು, ಅದರಲ್ಲಿ ಯಾವುದೋ ಒಂದು ವಸ್ತು ವಿಶೇಷವಿದೆ. ಅದನ್ನು ದೇವರೆನ್ನಿ, ಭಗವಂತ ಎನ್ನಿ, ಶಕ್ತಿ ಎನ್ನಿ, ಬ್ರಹ್ಮ ಎನ್ನಿ. ನಾವು ಎಲ್ಲದರಲ್ಲಿ ಆ ಶಕ್ತಿಯನ್ನು ಕಾಣುತ್ತೇವೆ. ನಮ್ಮ ದೇಶದಲ್ಲಿ ಪೂಜೆ ಮಾಡದ ಯಾವುದಾದರೂ ವಸ್ತು ಇದೆಯೇ? ಮರ, ಗಿಡ, ಎಲ್ಲ ಪ್ರಾಣಿಗಳು, ಕಲ್ಲು ಎಲ್ಲವೂ ಪೂಜೆಗೆ ಅರ್ಹವೇ.

ಕೆಲವರು ಇದನ್ನು ಹೀಗಳೆಯಬಹುದು. ಇವರು ಮಣ್ಣು, ಮರ, ಕಲ್ಲುಗಳನ್ನು ಪೂಜಿಸುವವರು, ಮೂರ್ಖರು ಎಂದು ಕೊಂಕು ನುಡಿಯಬಹುದು. ಅದು ಎಳಸು ಬುದ್ಧಿಯ ಮಾತು. ಪ್ರಪಂಚದ ಯಾವುದೇ ಸೃಷ್ಟಿಯಲ್ಲಿಯೂ ಇರುವ ಶಕ್ತಿಯನ್ನು ಗುರುತಿಸಿ ಗೌರವಿಸುವುದು ನಮ್ಮ ಪರಂಪರೆ. ತಮಗೆಲ್ಲ ಪ್ರಹ್ಲಾದನ ಕಥೆ ಗೊತ್ತು.

ತಾನು ಆರಾಧಿಸುವ ನಾರಾಯಣ ಎಲ್ಲೆಲ್ಲಿಯೂ ಇದ್ದಾನೆ ಎಂದು ಮಗು ಪ್ರಹ್ಲಾದ ಹೇಳಿದಾಗ ಘಡುಘಡಿಸುತ್ತ ತಂದೆ ಹಿರಣ್ಯಕಶಿಪು ಕೇಳಿದ: ‘ಎಲ್ಲೆಲ್ಲಿಯೂ ಇದ್ದಾನೆಯೇ? ಹಾಗಾದರೆ ಈ ಕಂಭದಲ್ಲಿ ಇದ್ದಾನೆಯೇ? ಆ ಕಂಭದಲ್ಲಿ ಇದ್ದಾನೆಯೇ?’ ಮಗು ‘ಹೌದು’ ಎಂದಾಗ ಉಕ್ಕಿ ಬಂದ ಕ್ರೋಧದಲ್ಲಿ ಕಂಭಕ್ಕೆ ಗದೆಯಿಂದ ಅಪ್ಪಳಿಸಿದಾಗ ಅದು ಸೀಳಿ ನರಸಿಂಹ ಹೊರಬಂದು ಅವನನ್ನು ಕೊಂದು ಹಾಕಿದ ಎನ್ನುವುದು ಪುರಾಣದ ಕಥೆ.

ನಮ್ಮ ಕಥೆಗಳು ತುಂಬ ಸಾಂಕೇತಿಕವಾದವುಗಳು. ಅದರ ಅರ್ಥ ಕಂಭದಂತಹ ಜಡವಸ್ತುವಿನಲ್ಲೂ ಭಗವಂತ ಇದ್ದಾನೆ. ವಿಜ್ಞಾನದ ದೃಷ್ಟಿಯಲ್ಲೂ ಜಡ ಎನ್ನುವುದು ಇಲ್ಲ. ನಾವು ಜಡವೆಂದು ಕರೆಯುವ ಕಲ್ಲು, ಮರದ ತುಂಡುಗಳು ಕೂಡ ಪರಮಾಣುಗಳಿಂದ ಆದವುಗಳು. ಅವುಗಳಲ್ಲಿರುವ ಇಲೆಕ್ಟ್ರಾನ್‌ಗಳು ಎಂದೂ ಸ್ಥಬ್ಧವಾಗಿರದೇ ಸದಾ ಚಲನಶೀಲವಾಗಿರುತ್ತವೆ. ಎಂದರೆ, ಮೇಲ್ನೋಟಕ್ಕೆ ಜಡದಂತೆ ತೋರುವ ವಸ್ತುವಿನ ಆಂತರ್ಯದೊಳಗೆ ಅನೂಹ್ಯವಾದ ಚೈತನ್ಯವಿದೆ.

ಅಲ್ಲಮಪ್ರಭು ಇದನ್ನು ಹೇಳುವ ಬಗೆ ಇನ್ನೂ ಸೊಗಸು:
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
|
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು !
ಗುಹೇಶ್ವರ ನಿಂದ ನಿಲವ ಅನುಭಾವ ಸುಖಿ ಬಲ್ಲ !

ಕಲ್ಲಿನೊಳಗೆ ಬೆಂಕಿ ಇದೆ ಆದರೆ ಅದು ಉರಿಯುವುದಿಲ್ಲ, ಒಂದಕ್ಕೊಂದು ಕಲ್ಲು ಉಜ್ಜಿದರೆ ಬೆಂಕಿ ಹೊರಗೆ ಬಂದೀತು. ಬೀಜದೊಳಗೆ ಬೃಹತ್ ಮರ ಅಡಗಿದೆ ಆದರೆ ತೋರುವುದಿಲ್ಲ. ಹಾಗೆಯೇ ಜಡವೆಂದು ತೋರುವ ಈ ವಿಶ್ವದಲ್ಲಿ ಚಿದ್ರೂಪಿ ದೇವರಿದ್ದಾನೆ, ಆದರೆ ಕಣ್ಣಿಗೆ ಕಾಣಲಾರ. ಅಷ್ಟು ಸೂಕ್ಷ್ಮ ಆತನ ಇರವು. ಅವನನ್ನು ಅರಿತವನು, ತನ್ನನ್ನೇ ತಾನು ಅರಿತ ವಿಮಲಜ್ಞಾನಿ, ಅನುಭಾವಿ.

ಯಾವ ಶಕ್ತಿ, ಚೈತನ್ಯ, ಪ್ರಪಂಚದ ಒಳಹೊರಗನ್ನು ಸಂಪೂರ್ಣವಾಗಿ ಆವರಿಸಿದ್ದರೂ ಅದರ ಅಳತೆ, ಭಾವ ನಮ್ಮ ನಿಲುಕಿಗೆ ಸಿಗದಿರುವುದು ವಿಚಿತ್ರ ಮಾತ್ರವಲ್ಲ, ವಿಶೇಷವೂ ಹೌದು. ಆ ವಿಶೇಷಕ್ಕೆ ತಲೆಬಾಗದೆ ನಮಗೆ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT